ನವರಾತ್ರಿಯ ಒಂಬತ್ತನೇ ದಿನವನ್ನು ಮಹಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ದುರ್ಗಾ ದೇವಿಯ ಒಂಬತ್ತನೇ ರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸುವ ಸಂಪ್ರದಾಯವಿದೆ. ಸಿದ್ಧಿದಾತ್ರಿಯನ್ನು ಎಲ್ಲಾ ರೀತಿಯ ಸಾಧನೆಗಳನ್ನು ನೀಡುವ ದೇವತೆ ಎಂದು ಪರಿಗಣಿಸಲಾಗಿದೆ. ಸಿದ್ಧಿದಾತ್ರಿಯು ಭಕ್ತಿಯಿಂದ ಪೂಜಿಸುವ ಭಕ್ತರಿಗೆ ಜ್ಞಾನ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.
ಮಾ ಸಿದ್ಧಿದಾತ್ರಿಯನ್ನು ಕಮಲದ ಹೂವಿನ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಆಕೆಯ ಸುತ್ತಲೂ ಇರುವ ದೇವತೆಗಳು ಮತ್ತು ಭಕ್ತರು ಆಕೆಯನ್ನು ಪೂಜಿಸುತ್ತಾರೆ. ತಾಯಿ ಸಿದ್ಧಿದಾತ್ರಿಯ ಆಶೀರ್ವಾದದಿಂದ ಭಖ್ತರು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗುತ್ತಾರೆ ಮತ್ತು ಸಂತೋಷ, ಶಾಂತಿಯನ್ನು ಪಡೆಯುತ್ತಾರೆ. ಸಿದ್ಧಿದಾತ್ರಿ ತನ್ನ ಕೈಗಳಲ್ಲಿ ಚಕ್ರ, ಗದೆ, ಶಂಖ ಚಿಪ್ಪು ಮತ್ತು ಕಮಲದ ಹೂವನ್ನು ಹಿಡಿದಿರುತ್ತಾಳೆ.
ಮಹತ್ವ
ನವರಾತ್ರಿಯ ಒಂಬತ್ತನೇ ದಿನ ಅಪಾರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಈ ದಿನ ಭಕ್ತರು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಿ ಅವಳ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನದಂದು ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ. ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗುತ್ತದೆ. ಅಲ್ಲದೆ ಈ ದಿನದಂದು, ಅನೇಕ ಸ್ಥಳಗಳಲ್ಲಿ ಕನ್ಯಾ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಅಲ್ಲಿ ಒಂಬತ್ತು ಹೆಣ್ಣು ಮಕ್ಕಳನ್ನು ದೇವತೆಗಳೆಂದು ಪರಿಗಣಿಸಿ ಪ್ರಸಾದವನ್ನು ನೀಡಿ ಪೂಜಿಸಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯಲಾಗುತ್ತದೆ.
ಪೂಜಾ ವಿಧಾನ
ನವರಾತ್ರಿಯ ಒಂಬತ್ತನೇ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಸೂರ್ಯೋದಕ್ಕಿಂತ ಮುಂಚೆ ಪೂಜೆಗೆ ವ್ಯವಸ್ಥೆ ಮಾಡಿಕೊಳ್ಳಿ. ಸಿದ್ಧಿ ಅಂದರೆ ಅಲೌಕಿಕ ಶಕ್ತಿ, ಸೃಷ್ಟಿ ಹಾಗೂ ಸಾಧಿಸುವ ಸಾಮಾರ್ಥ್ಯ ಮತ್ತು ದಾತ್ರಿ ಅಂದರೆ ಕೊಡುವುದು. ಇದರಿಂದ ಸಿದ್ಧಿದಾತ್ರಿಯ ಪೂಜಾಫಲವೇನು ಎಂದು ತಿಳಿಯುತ್ತದೆ.
ದೇವಿಯ ವಿಗ್ರಹವನ್ನು ಕಲಶದ ಬಳಿ ಇರಿಸಬೇಕು. ದೇವಿಗೆ ಪಾನ್ ಮತ್ತು ಸುಪಾರಿ ನೀಡಿ. ಹೂವುಗಳನ್ನು ನೀಡಲಾಗುತ್ತದೆ, ಮೇಲಾಗಿ ಗುಲಾಬಿ ಹೂವು. ಧೂಪ ಕಡ್ಡಿಗಳನ್ನು ನೀಡಲಾಗುತ್ತದೆ. ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸಲಾಗುತ್ತದೆ. ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಮಂತ್ರಗಳನ್ನು ಪಠಿಸಲಾಗುತ್ತದೆ. ಕೆಲವು ಭಕ್ತರು ಈ ದಿನ ಉಪವಾಸ ಮಾಡುತ್ತಾರೆ.
ಈ ದಿನ ಸಿದ್ಧಿದಾತ್ರಿಗೆ ಸಂಪಿಗೆ ಹೂವು ಇಡಿ. ಯಾಕೆಂದರೆ ಸಿದ್ಧಿದಾತ್ರಿಗೆ ಸಂಪಿಗೆ ಹೂವು ಅಂದರೆ ಇಷ್ಟ. ಅಲ್ಲದೆ ತೆಂಗಿನಕಾಯಿ, ಹೂವು, ಹಣ್ಣು ಇಟ್ಟು, ನೈವೇದ್ಯ, ಪಂಚಾಮೃತ ಅರ್ಪಿಸಿ. ಪೂರಿ, ಹಲ್ವಾ ಮತ್ತು ಸಿಹಿ ತಿನಿಸುಗಳನ್ನು ಅರ್ಪಿಸುವುದು ಹೆಚ್ಚು ಮಂಗಳಕರ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.
ಪೂಜಾ ಫಲ
ಮಹಾನವಮಿಯ ದಿನದಂದು ಭಕ್ತರು ಉಪವಾಸ, ಹವನ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ ಮಾತೆಯ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಈ ದಿನದ ಮಹತ್ವವು ಕೆಡುಕಿನ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ಮಾ ಸಿದ್ಧಿದಾತ್ರಿಯ ಆರಾಧನೆಯು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನೀಡುತ್ತದೆ. ನವರಾತ್ರಿಯ ಒಂಬತ್ತನೇ ದಿನ ಶುದ್ಧ ಭಕ್ತಿ, ನಂಬಿಕೆ ಮತ್ತು ಶಕ್ತಿಯ ಸಂಕೇತವಾಗಿದೆ. ಇದು ನವರಾತ್ರಿಯ ಮುಕ್ತಾಯದ ಮೊದಲು ಭಕ್ತರಿಗೆ ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡುತ್ತದೆ.
ಸಿದ್ಧದಾತ್ರಿ ಮಾತೆಯ ಪ್ರಸಿದ್ಧ ದೇವಾಲಯ
ಭೋಪಾಲ್‌ನ ಕೋಲಾರ ಪ್ರದೇಶದ ಸಣ್ಣ ಬೆಟ್ಟದ ಮೇಲೆ ಸಿದ್ಧದಾತ್ರಿ ಮಾತೆಯ ಪ್ರಸಿದ್ಧ ದೇವಾಲಯವಿದೆ. ಈ ದೇವಾಲಯವನ್ನು ಜಿಜಿಬಾಯಿ ದೇವಾಲಯ ಎಂದೂ ಕರೆಯುತ್ತಾರೆ. ಜನರು ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಈ ದೇಗುಲಕ್ಕೆ ಆಗಮಿಸುತ್ತಾರೆ. ಭಕ್ತರ ಇಷ್ಟಾರ್ಥಗಳು ಈಡೇರಿದ ನಂತರ ತಾಯಿ ದೇವಿಗೆ ಹೊಸ ಪಾದರಕ್ಷೆಗಳನ್ನು ಅರ್ಪಿಸುತ್ತಾರೆ. ಬೇಸಿಗೆಯಲ್ಲಿ ದುರ್ಗೆಗೆ ಚಪ್ಪಲಿ, ಕನ್ನಡಕ, ಕ್ಯಾಪ್ ಮತ್ತು ವಾಚ್ ಗಳನ್ನೂ ನೀಡಲಾಗುತ್ತದೆ. ಯಾವುದೇ ಭಕ್ತರು ಮಾತೆಯ ಬಾಗಿಲಿಗೆ ಬಂದರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಈ ದೇವಾಲಯದಲ್ಲಿದೆ.
ಮಂತ್ರ
ಮಹಾ ನವಮಿಯಂದು “ಓಂ ದೇವಿ ಸಿದ್ಧಿದತ್ರ್ಯೈ ನಮಃ” ಎಂದು ಪಠಿಸುವ ಮೂಲಕ ಸಿದ್ಧಿದಾತ್ರಿ ದೇವಿಯ ಆಶೀರ್ವಾದವನ್ನು ಪಡೆಯಿರಿ.
ಯಾರೀ ಸಿದ್ಧಿದಾತ್ರಿ?
ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಪರಶಿವನು ಬ್ರಹ್ಮಾಂಡದ ಸೃಷ್ಟಿಯ ವೇಳೆ ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಆದರೆ ಶಕ್ತಿ ದೇವತೆಯು ಎಷ್ಟೇ ಆರಾಧಿಸಿದರೂ ಪ್ರತ್ಯಕ್ಷಳಾಗಲಿಲ್ಲ. ನಂತರ ಶಿವನ ಎಡ ಭಾಗದ ಅರ್ಧದಲ್ಲಿ ಆಕೆ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.