ವೀಕ್ಷಕವಾಣಿ: ಸ್ಟಾಫ್ ನಸ್೯ಗೆ ಮಾನಸಿಕ ಹಾಗೂ ಲೈಂಗಿಕ ಕಿರುಕಳ ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯನ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನಗೆ ಸಹಕರಿಸು ಎಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ನರ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಪ್ಪಳ ತಾಲೂಕು ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಮೂಲಿಮನಿ ಸ್ಟಾಪ್ ನಸ್೯ ಅಮಿನಾ ಬೇಗಂ ಅವರಿಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದನು. ಈ ವಿಚಾರವನ್ನು ಅಮಿನಾ ಅವರು ತನ್ನ ಪತಿಗೆ ಹೇಳಿದ್ದರು ಎಂಬ ವಿಚಾರ ತಿಳಿದ ವೈದ್ಯ ರಮೇಶ್ ಕೋಪಗೊಂಡು ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದನು. ಸಂಸಾರ ಒಡೆಯುತ್ತೆನೆ, ದಂಪತಿಯನ್ನು ಬೇರ್ಪಡಿಸುತ್ತೆನೆಂದು ಅವಾಜ್ ಹಾಕಿದ್ದನು.
ಅಷ್ಟಕ್ಕೂ ನಿಲ್ಲದ ವೈದ್ಯ ರಮೇಶ್ನ ಕಿರುಕುಳ, ಅಮಿನಾ ಅವರ ಕಳೆದ ಎರಡೂ ತಿಂಗಳ ಸಂಬಳ ತಡೆಹಿಡಿದಿದ್ದಾನೆ. ಇದನ್ನ ಕೇಳಲು ಹೋಗಿದ್ದ ಅಮಿನಾ ಪತಿಯ ವಿರುದ್ಧವೇ ದೂರು ನೀಡಿ ಜೈಲಿಗಟ್ಟಿದ್ದನು. ಸದ್ಯ ಕಿರುಕುಳದಿಂದ ಬೇಸತ್ತ ಅಮಿನಾ ಬೇಗಂ ಅವರು ಅಳವಂಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದರ ಅನ್ವಯ ಪೊಲೀಸರು ವೈದ್ಯ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.