ಕಾಸರಗೋಡು: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ಮೊಸಳೆಯೆಂದೇ ಪ್ರಸಿದ್ಧಿ ಪಡೆದಿದ್ದ ಬಬಿಯಾವು ಹರಿಪಾದ ಸೇರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಬಿಯಾದ ಅಂತಿಮ ಸಂಸ್ಕಾರ ನಡೆಸಿದ ಜಾಗದಲ್ಲಿ ಪುಷ್ಪಾರ್ಚನೆ ಜರಗಿತು.
ಶ್ರೀ ಕ್ಷೇತ್ರದಲ್ಲಿ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ, ಬಲಿವಾಡು ಕೂಟ, ಮಧ್ಯಾಹ್ನ ವಿಶೇಷ ಮಹಾಪೂಜೆ, ಅನ್ನಸಂತರ್ಪಣೆ ಸಹಿತ ಇನ್ನಿತರ ಕಾರ್ಯಕ್ರಮ ನಡೆಯಿತು.
ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸಿ ಮಾತನಾಡಿದರು. ಬಬಿಯಾ ಮತ್ತು ಅನಂತಪುರ ದೇಗುಲದ ನಡುವಿನ ಅವಿನಾಭಾವ ಸಂಬಂಧವನ್ನು ಅವರು ಈ ಸಂದರ್ಭ ವಿವರಿಸಿದರು.
ಅನಂತಪುರ ಶ್ರೀ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾಧವ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತೆ ಪ್ರಿಯಾ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಮುಂತಾದವರು ಪಾಲ್ಗೊಂಡಿದ್ದರು.
ವಿನಂತಿ ಪತ್ರ ಬಿಡುಗಡೆ
ಇದೇ ವೇಳೆ ಶ್ರೀ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗಾಗಿ ಊರಿನ ಪ್ರತೀ ಮನೆಯಿಂದ 5,000 ರೂ. ವಂತಿಗೆ ಸ್ವೀಕರಿಸುವ ನಿಟ್ಟಿನಲ್ಲಿ ವಿನಂತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ ಸ್ವಾಗತಿಸಿ, ಸತ್ಯಶಂಕರ ಅನಂತಪುರ ವಂದಿಸಿದರು. ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.