
ಬಾಗಲಕೋಟೆ: ಸಾಲು ಸಾಲು ಪಪ್ಪಾಯಿ ಗಿಡಗಳು, ಗಿಡದಲ್ಲಿ ಪಪ್ಪಾಯಿ ಹಣ್ಣು ಕಾಯಿಗಳ ಗೊಂಚಲು, ಇನ್ನೊಂದು ಕಡೆ ಟೊಮ್ಯಾಟೊ ಮತ್ತೊಂದು ಕಡೆ ಡ್ರ್ಯಾಗನ್ ಫ್ರೂಟ್ ಕೃಷಿ. ಎಲ್ಲವೂ ಕೈಗೆ ಜಣ ಜಣ ಕಾಂಚಾಣ ತಂದು ಕೊಡುವ ಬೆಳೆಗಳೆ. ಇಂತಹ ಹೊಲದಲ್ಲಿ ಸಾದಾ ರೈತನಂತೆ ಕೆಲಸ ಮಾಡುತ್ತಿರುವ ರೈತರು. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಹೊರವಲಯದಲ್ಲಿರುವ ಶಿವಪ್ಪ ಕುರಿ ಎಂಬ ರೈತರ ತೋಟದಲ್ಲಿ. 25 ವರ್ಷದಿಂದ ಟೊಮ್ಯಾಟೊ, ಪಪ್ಪಾಯಿ ಸೇರಿದಂತೆ ಅನೇಕ ಹಣ್ಣು ತರಕಾರಿಯನ್ನು ದಾಖಲೆ ಪ್ರಮಾಣದಲ್ಲಿ ಬೆಳೆದವರು. ಈಗ ಪಪ್ಪಾಯಿ, ಟೊಮ್ಯಾಟೊ ಜೊತೆಗೆ ಡ್ರ್ಯಾಗನ್ ಫ್ರೂಟ್ ಕೂಡ ಬೆಳೆದಿದ್ದು, ವರ್ಷಕ್ಕೆ ಕೋಟಿ ಕೋಟಿ ಲಾಭ ಪಡೆಯುತ್ತಿದ್ದಾರೆ.
17 ಎಕರೆಯಲ್ಲಿ ಟೊಮ್ಯಾಟೊ ಬೆಳೆದು 80ಲಕ್ಷ ಆದಾಯ:
ಈ ವರ್ಷ ಹನ್ನೊಂದು ಎಕರೆ ಟೊಮ್ಯಾಟೊದಿಂದ ಹತ್ತು ಲಕ್ಷ ಆದಾಯ ಪಡೆದಿದ್ದು, ಇನ್ನು ಹದಿನೈದು ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಒಟ್ಟು 25 ಎಕರೆ ಹೊಲದಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಕಳೆದ ವರ್ಷ 17 ಎಕರೆ ಪಪ್ಪಾಯಿಯಿಂದ ಖರ್ಚು ತೆಗೆದು ಲಾಭ ಪಡೆದದ್ದು ಬರೊಬ್ಬರಿ 60 ಲಕ್ಷ. ಟೊಮ್ಯಾಟೊ 17 ಎಕರೆಯಲ್ಲಿ ಖರ್ಚು ವೆಚ್ಚ ತೆಗೆದು 80 ಲಕ್ಷ ಲಾಭ ಪಡೆದಿದ್ದರು. ಈ ವರ್ಷ ಪಪ್ಪಾಯಿ 35 ಎಕರೆ ಮೂಲಕ ಒಂದು ಕೋಟಿಗೂ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಡ್ರ್ಯಾಗನ್ ಪ್ರೂಟ್ನಿಂದಲೂ ಆದಾಯ ಕೈ ಸೇರಲಿದೆ.
ಇನ್ನು ಈ ವರ್ಷ ಡ್ರ್ಯಾಗನ್ ಪ್ರುಟ್ನಿಂದ 50 ಸಾವಿರ ಆದಾಯ ಬರಲಿದ್ದು, ಮುಂದಿನ ವರ್ಷದಿಂದ ಡ್ರ್ಯಾಗನ್ ಫ್ರೂಟ್ನಿಂದಲೂ ಭರ್ಜರಿ ಲಾಭ ಕೈ ಸೇರಲಿದೆ. ಒಟ್ಟು 57 ಎಕರೆಯಲ್ಲಿ ತರಕಾರಿ ಹಣ್ಣು ಕೃಷಿಯಿಂದ ಪ್ರತಿ ವರ್ಷ ಒಂದುವರೆ ಕೋಟಿಯಷ್ಟು ಆದಾಯ ಪಡೆದು ಕೋಟ್ಯಾಧಿಪತಿ ರೈತ ಎಂದನೆಸಿಕೊಳ್ಳುತ್ತಿದ್ದಾರೆ ಶಿವಪ್ಪ. ಇವರ ಕೃಷಿ ಕಾರ್ಯ ಎಲ್ಲ ರೈತರಿಗೂ ಮಾದರಿಯಾಗಿದ್ದು, ಇವರ ಕೃಷಿ ಕಾರ್ಯಕ್ಕೆ ಇತರೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ಅದರಲ್ಲೇ ಕೊರಗುವ ರೈತರು ಅನೇಕರಿದ್ದಾರೆ. ಆದರೆ ಹುಟ್ಟಿದ ಊರನ್ನು ಬಿಟ್ಟು ಬಂದು ಕೃಷಿಯಲ್ಲಿ ಕೋಟಿ ಕೋಟಿ ಗಳಿಸುವ ಶಿವಪ್ಪ ಎಲ್ಲರಿಗೂ ಮಾದರಿಯಾಗಿದ್ದಾರೆ. ರೈತ, ಮಣ್ಣನ್ನು ನಂಬಿದರೆ ಭೂ ತಾಯಿ ಎಂದು ಕೈ ಬಿಡೋದಿಲ್ಲ ಎನ್ನುತ್ತಿದ್ದಾರೆ.