ವಿಟ್ಲ: ಆಟೋ ರಿಕ್ಷಾವೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಸೆ.೧೬ ರಂದು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಕಸಬಾ ಗ್ರಾಮ ಸುಳ್ಯ ನಿವಾಸಿಯಾದ ಎನ್.ಎಂ ಮಹಮ್ಮದ್ ಕಲಂದರ್ ಶಾ (36 ವ.) ಬಂಧಿತ ಆರೋಪಿಯಾಗಿದ್ದು, ವಿಟ್ಲ ಠಾಣಾ ಪೊಲೀಸರು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಆಟೋ ರಿಕ್ಷಾದೊಳಗೆ 6.110 ಕೆ.ಜಿ ಗಾಂಜಾ ಪತ್ತೆಯಾಗಿದೆ.
ಕೂಡಲೇ ಆರೋಪಿಯನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಯ ವಿರುದ್ಧ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.