ಕೂಡ್ಲು: ಹತ್ತು ದಿನಗಳ ಬಾಣಂತಿಯ ಮೃತದೇಹ ಬಾವಿಯಲ್ಲಿ ಪತ್ತೆ!

Share with

ಕಾಸರಗೋಡು : ಹತ್ತು ದಿನಗಳ ಬಾಣಂತಿಯೋರ್ವಳ ಮೃತದೇಹ ಮನೆ ಪರಿಸರದ ಬಾವಿಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಪಾರೆಕಟ್ಟೆ ಬಳಿ ಸೆ.16ರಂದು ತಡರಾತ್ರಿ ನಡೆದಿದೆ‌.

ಸೋಮನಾಥ ಆಚಾರ್ಯರ ಪುತ್ರಿ ,ಕಂಬಾರು ಬೆದ್ರಡ್ಕದ ಪೋಸ್ಟು ಮಾಸ್ತರ್ ವೃತ್ತಿಯಲ್ಲಿದ್ದ ಸುರೇಖ (29) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.

ಜೋಡುಕಲ್ಲು ಸಮೀಪದ ಅರಿಯಾಳ ನಿವಾಸಿ ಜಯ ಕುಮಾರ್ ಆಚಾರ್ಯ ಎಂಬವರ ಪತ್ನಿಯಾದ ಸುರೇಖ ಕಳೆದ ಹತ್ತು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಸುರೇಖ ಅವರ ಬಳಿ ಅವರ ತಾಯಿ, ಅತ್ತೆ ಹಾಗೂ ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ಮಗು ಅಳುತ್ತಿದ್ದು ಮನೆಯವರು ಎದ್ದು ನೋಡಿದಾಗ ಸುರೇಖ ಮಲಗಿದ್ದಲ್ಲಿ ಇರಲಿಲ್ಲ ಬಳಿಕ ನಡೆಸಿದ ಹುಡುಕಾಟದಲ್ಲಿ ಮನೆ ಸಮೀಪದ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿತ್ತು.

ಬಾಣಂತಿ ಸಮಯದಲ್ಲಿ ಆಪರೇಷನ್ ಕಳೆದಿದ್ದ ಸುರೇಖರಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿರುವುದಾಗಿ ತಿಳಿಸುತ್ತಿದ್ದು ಈ ನಡುವೆ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಪೋಸ್ಟು ಮಾಸ್ತರ್ ಹುದ್ದೆ ನಿರ್ವಹಿಸುತ್ತಿದ್ದ ಸುರೇಖ ಬಹಳ ಚುರುಕಿನೊಂದಿಗೆ ಎಲ್ಲರೊಡನೆ ಆತ್ಮೀಯತೆಯಿಂದ ವರ್ತಿಸುತ್ತಿದ್ದಳು. ಶಾಸ್ತ್ರೀಯ ಸಂಗೀತ ಅಭ್ಯಸಿಸಿ ವಯಲಿನ್ ವಾದಕಿಯಾಗಿಯೂ ಗುರುತಿಸಿಕೊಂಡಿದ್ದ ಪ್ರತಿಭಾನ್ವಿತೆಯಾಗಿದ್ದರು. ಕಳೆದೆರಡು ವರ್ಷಗಳ ಹಿಂದೆ ವಿವಾಹಿತರಾದ ಇವರು ಗಂಡನ ಮನೆಯಲ್ಲೂ ಪರಿಸರದಲ್ಲೂ ಆತ್ಮೀಯತೆ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತರು ಹತ್ತು ದಿನದ ಗಂಡು ಮಗು ತಾಯಿ ರೇವತಿ, ಸಹೋದರಿ ರೇಖ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೃತದೇಹವನ್ನು ಪಂಚೆನಾಮೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.


Share with

Leave a Reply

Your email address will not be published. Required fields are marked *