ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಚಿಪ್ಪಾರು ಶಾಲಾ ಬಳಿಯಲ್ಲಿ ಮಾವಿನ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಅಧಿಕೃತರು ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.
ಈ ಮರ ವಿದ್ಯುತ್ ಹೈಟೆನ್ಸನ್ ತಂತಿಯ ಭಾಗಕ್ಕೆ ವಾಲಿ ನಿಂತಿದ್ದು, ಮರ ಮರಿದು ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇದು ಶಾಲಾ ವಿದ್ಯಾರ್ಥಿಗಳು ನಾಗರೀಕರು ಅಡ್ಡಾಡುವ ಸ್ಥಳವಾಗಿರುವುದರಿಂದ ಅಧಿಕೃತರು ತಕ್ಷಣವೇ ಇತ್ತ ಕಣ್ಣು ಹಾಯಿಸಬೇಕಾಗಿದೆ. ಇದು ಬಿದ್ದಲ್ಲಿ ವಿದ್ಯುತ್ ಕಂಬ ಮುರಿದು ಬೀಳುವುದಂತು ಖಂಡಿತ. ಇದರ ಕೆಳಭಾಗದಲ್ಲಿ ಲಾಲಾಭಾಗ್ ಗೆ ಸಂಚರಿಸುವ ಪ್ರಧಾನ ರಸ್ತೆ ಇದ್ದು, ಬಸ್ ಸಹಿತ ಹಲವಾರು ವಾಹನಗಳು ಈ ಮೂಲಕ ಪ್ರತಿನಿತ್ಯ ಸಂಚರಿಸುತ್ತದೆ.
ಹಲವು ತಿಂಗಳ ಹಿಂದೆ ಸ್ಥಳಿಯರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಉದ್ಯೋಗಸ್ಥರು ಮರ ಕಡಿಯಲು ತಲುಪಿದ್ದರು. ಆದರೆ ಅಂದು ಪರಿಸರದಲ್ಲಿ ಓಣಂ ಕಾರ್ಯಕ್ರಮ ನಡೆಯುತ್ತಿರುವುದರಿಂದ ಮರುದಿನ ಮರವನ್ನು ತೆರವುಗೊಳಿಸಲಾಗುವುದಾಗಿ ತಿಳಿಸಿ ಹೋದವರು ಇದುವರೆಗೂ ಬರಲಿಲ್ಲವೆಂದು ನಾಗರಿಕರು ತಿಳಿಸಿದ್ದಾರೆ. ಇನ್ನಾದರೂ ಅಪಾಯದ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸಿ ಅಪಾಯವನ್ನು ತಪ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.