ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮ

Share with

ಇಸ್ರೋದ ಸಹ ನಿರ್ದೇಶಕ ಡಾ.ಬಿ.ಎಚ್.ಎಂ.ದಾರುಕೇಶ ಅವರು ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೆಳ್ತಂಗಡಿ: ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳೆರಡರ ಪರಸ್ಪರ ಆಧರಿಸಿಕೊಳ್ಳುವ ಸಮಯೋಚಿತ ಸಂಯೋಜನೆಯ ನೆರವಿನೊಂದಿಗೆ ಭಾರತದ ಶೈಕ್ಷಣಿಕ ಮತ್ತು ಔದ್ಯಮಿಕ ವಲಯಗಳನ್ನು ಗಟ್ಟಿಗೊಳಿಸಬಹುದು. ವಿಶ್ವದ ವೈಜ್ಞಾನಿಕ ರಂಗದಲ್ಲಿ ಇನ್ನಷ್ಟು ಮಹತ್ವದ ಸಾಧನೆಯ ಹೆಗ್ಗುರುತುಗಳನ್ನು ಮೂಡಿಸಬಹುದು ಎಂದು ಬೆಂಗಳೂರಿನ ಇಸ್ರೋದ ಸಹ ನಿರ್ದೇಶಕ ಡಾ.ಬಿ.ಎಚ್.ಎಂ.ದಾರುಕೇಶ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ನೂತನವಾಗಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅ.4ರಂದು ಆಯೋಜಿಸಲಾಗಿದ್ದ ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ಮಾನವಿಕ ಅಕ್ಯಾಡೆಮಿಕ್ ವಲಯಗಳೆರಡೂ ಪರಸ್ಪರ ಕೊಡುಕೊಳ್ಳುವಿಕೆಯೊಂದಿಗೆ ಮುಂದಡಿಯಿಡಬೇಕು. ಮಾನವಿಕ ಜ್ಞಾನಶಾಸ್ತ್ರವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ತಮ್ಮ ವಿಶೇಷ ಆಸಕ್ತಿ ಮತ್ತು ಕುತೂಹಲದ ಆಲೋಚನೆಗಳೊಂದಿಗೆ ವಿಜ್ಞಾನರಂಗದಲ್ಲಿಯೂ ವೃತ್ತಿಪರ ಅವಕಾಶಗಳನ್ನು ಪಡೆಯಬಹುದು. ನಿಸರ್ಗದ ಭೌತಿಕ ಶಕ್ತಿಯ ಕಾರ್ಯ-ಕಾರಣ ಸಂಬಂಧಗಳನ್ನು ಶೋಧಿಸುವುದು ವಿಜ್ಞಾನಿಯ ಆದ್ಯತೆಯಾಗಿರುತ್ತದೆ. ಈ ಆದ್ಯತೆಯೊಂದಿಗೆ ನಡೆಯುವ ಶೋಧನೆಯ ಫಲಿತಗಳ ಪ್ರಯೋಜನ ದೈನಂದಿನ ಬದುಕಿನಲ್ಲಿ ಸಿಗಲು ಮಾನವಿಕ ವಿಜ್ಞಾನದ ಕಲಿಕೆಯೂ ತುಂಬಾ ಮಹತ್ವದ್ದೆನ್ನಿಸುತ್ತದೆ. ವೈಜ್ಞಾನಿಕ ಆವಿಷ್ಕಾರಗಳ ಅಥಪೂರ್ಣ ಮತ್ತು ರಚನಾತ್ಮಕ ಅನುಷ್ಠಾನಕ್ಕೆ ಮಾನವಿಕ ನೆಲೆಗಟ್ಟಿನ ಚಿಂತನೆಗಳು ಸಹಕಾರಿ. ವಿಜ್ಞಾನ ಮತ್ತು ಶಿಕ್ಷಣ ಎರಡೂ ವಲಯಗಳ ನೈಜ ಚಿಂತನೆಯುಳ್ಳ ವಿದ್ವಾಂಸರಿಂದ ಮಾತ್ರ ಸಶಕ್ತ ಸಮಾಜ ನಿರ್ಮಾಣವಾಗಬಲ್ಲದು ಎಂದು ಹೇಳಿದರು.

ಚಂದ್ರಯಾನದ ಯಶಸ್ವಿ ಹೆಜ್ಜೆಯ ನಂತರ ಹೊಸ ಪೀಳಿಗೆ ಅತ್ಯಂತ ಕುತೂಹಲದೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನದ ಭವಿಷ್ಯದ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದೆ. ಮಂಗಳನ ಅಂಗಳವನ್ನು ತಲುಪಬಹುದಾದ ವತ್ತು ಸೂರ್ಯನ ಹತ್ತಿರ ಹೋಗಿ ಮೌಲಿಕ ಸಂಶೋಧನೆಯ ಸಾಧ್ಯತೆಗಳು ಯಾವಾಗ ಅನಾವರಣಗೊಳ್ಳುತ್ತವೆ ಎಂಬ ನಿರೀಕ್ಷೆ ಯುವ ಸಮೂಹದಲ್ಲಿದೆ. ಈ ನಿರೀಕ್ಷೆಗಳಿಗೆ ಅನುಗುಣವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಇನ್ನಷ್ಟು ಮಹತ್ವದ ಹೆಜ್ಜೆಗಳನ್ನಿರಿಸಲಿದೆ ಎಂದರು.

ನಳಂದ ಮತ್ತು ತಕ್ಷಶಿಲಾದಂತಹ ಭಾರತೀಯ ವಿಶ್ವವಿದ್ಯಾನಿಲಯಗಳು ಜಗತ್ತಿಗೆ ಜ್ಞಾನವನ್ನು ಧಾರೆಯೆರೆದಿದ್ದವು. ಭಾರತದ ಚಂದ್ರಯಾನದ ಮೂಲಕ ಮಗದೊಮ್ಮೆ ಭಾರತವು ವೈಜ್ಞಾನಿಕ ರಂಗದಲ್ಲಿ ಮಹತ್ತರ ಸಾಧನೆಗೈದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಕಾಲೀನ ವಿದ್ಯಾರ್ಥಿವೃಂದವು, ತಮ್ಮ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಳವಾದ ಜ್ಞಾನವನ್ನು ಹೊಂದಿರಬೇಕು. ಎಲ್ಲ ರೀತಿಯ ಉದ್ಯೋಗಗಳ ಕುರಿತಾಗಿ ಮಾಹಿತಿಯನ್ನು ಹೊಂದಿರಬೇಕು. ಆಯಾ ಕ್ಷೇತ್ರಗಳ ಕುರಿತಾದ ಮಾಹಿತಿಯು ಒಂದಿಲ್ಲೊಂದು ರೂಪದಲ್ಲಿ ಸಹಾಯಕ್ಕೆ ಬರುವುದೆಂದರು.

ಚಂದ್ರಯಾನ- 1 ಮತ್ತು ಚಂದ್ರಯಾನ- 2 ರ ಸಂದರ್ಭದಲ್ಲಿ, ಮುಂದಾಲೋಚನೆಯಿಂದ ಇಸ್ರೋ ನಡೆಸಿದ್ದ ಸಿದ್ಧತೆಗಳು, ದೇಶೀಯವಾಗಿ ತಯಾರಿಸಲ್ಪಟ್ಟ ತಂತ್ರಜ್ಞಾನದೆಡೆ ಸಾಕಷ್ಟು ಗಮನವನ್ನು ಹರಿಸಿದ್ದವು. ಹೀಗಾಗಿಯೇ, ಸ್ವಯಂಕೃತವಾಗಿ ಈ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯವಾಯಿತೆಂದು ಅವರು ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ.ಬಿ.ಹೆಚ್.ಎಂ.ದಾರುಕೇಶ ಅವರು ಇಸ್ರೋದ ಆಂತರಿಕ ಬೆಳವಣಿಗೆಯ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳ ಕುರಿತಾಗಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡರು. ಇಸ್ರೋದ ಯೋಜನೆಯ ಸಮಾನಕಾಲದಲ್ಲಿಯೇ ರಷ್ಯಾ ಕೂಡ ಚಂದಿರನ ಅಂಗಳವನ್ನು ತಲುಪಲು ಪ್ರಯತ್ನಪಟ್ಟು ಸೋತಿತ್ತು. ಅದರ ಆಂತರಿಕ ಕಾರಣಗಳು ಮತ್ತು ಭಾರತದ ಚಂದ್ರಯಾನದಲ್ಲಿ ಬಳಸಿದ ತಾಂತ್ರಿಕ ಉಪಕರಣಗಳ ಸಾಮಥ್ರ್ಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಕುರಿತಾಗಿಯೂ ತಿಳಿಯಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಈ ಸಂವಾದದಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಮಾತನಾಡಿದರು. ಹೊಸ ಕಾಲದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರುಗೊಳ್ಳುವ ಸಾಂದರ್ಭಿಕ ಬಿಕ್ಕಟ್ಟುಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳುವ ವಿಶೇಷ ಸಾಮಥ್ರ್ಯವನ್ನು ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನ್ವಯಿಕ ದೃಷಿಕೋನದೊಂದಿಗೆ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಹೊಸದನ್ನು ತಿಳಿದುಕೊಳ್ಳುವ ಕುತೂಹಲ ಮತ್ತು ಹಂಬಲಗಳೊಂದಿಗೆ ಜ್ಞಾನಸಾಮಥ್ರ್ಯವನ್ನು ವಿಸ್ತರಿಸಿಕೊಳ್ಳುವುದರ ಕಡೆಗೆ ವಿದ್ಯಾರ್ಥಿಗಳು ತಮ್ಮ ಸ್ನಾಕೋತ್ತರ ಅಧ್ಯಯನವನ್ನು ಮೀಸಲಿರಿಸಬೇಕು ಎಂದು ಕಿವಿಮಾತು ಹೇಳಿದರು.

ಎಸ್.ಡಿ.ಎಂ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ಎಸ್.ಎನ್.ಕಾಕತ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ನೆಫೀಸತ್ ಮತ್ತು ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ವಂದಿಸಿದರು.


Share with

Leave a Reply

Your email address will not be published. Required fields are marked *