ಬೆಳ್ತಂಗಡಿ: ಮದುವೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಮುಜರಾಯಿ ಇಲಾಖೆ 2021ರಲ್ಲಿ ರಾಜ್ಯಾದ್ಯಂತ ಜಾರಿಗೆ ತಂದಿದ್ದ ‘ಸಪ್ತಪದಿ’ ಯೋಜನೆಯನ್ನು ಮುಂದುವರಿಯುವ ಸೂಚನೆ ಲಭಿಸಿದೆ.
ಬಿಜೆಪಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ಮುತುವರ್ಜಿಯಿಂದ ‘ಸಪ್ತಪದಿ’ ಆರಂಭವಾಗಿತ್ತು. ಹೊಸ ಸರಕಾರ ಈ ಯೋಜನೆ ಮುಂದುವರಿಸುವ ಬಗ್ಗೆ ಇದುವರೆಗೂ ಯಾವುದೇ ಸೂಚನೆ ಹೊರಡಿಸಿರಲಿಲ್ಲ. ಆದರೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಯೋಜನೆ ಮುಂದುವರಿಸುವ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ಯೋಜನೆಯ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ಕೆ.ಎಸ್.ಆರ್.ಟಿ.ಸಿ. ಹಾಗೂ ಇತರೆ ನಿಗಮಗಳಿಗೆ 13 ಸಾವಿರ ಸಿಬ್ಬಂದಿ ನೇಮಕ ಹಾಗೂ 4 ಸಾವಿರ ಬಸ್‌ಗಳನ್ನು ಖರೀದಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಧರ್ಮಸ್ಥಳಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದರು.