‘’ಖುರ್ರತುಸ್ಸಾದಾತ್’ ಉರೂಸ್‌ಗೆ ಹರಿದುಬಂದ ಜನಸಾಗರ; ನೂಕುನುಗ್ಗಲಿಗೆ ಉಸಿರುಗಟ್ಟಿ ಹಲವರು ಅಸ್ವಸ್ಥ!

Share with

ಪುತ್ತೂರು: ಕುದ್ಮಾರು ಕೂರತ್ ಫಝಲ್ ನಗರದಲ್ಲಿ ನಡೆಯುತ್ತಿರುವ ಖುರ್ರತುಸ್ಸಾದಾತ್ ‘ಕೂರತ್ ತಂಜಳ್’ ಉರೂಸ್ ಮುಬಾರಕ್‌ಗೆ ಕೊನೆಯ ದಿನವಾದ ಜೂ.೨೯ರಂದು ಜನಸಾಗರವೇ ಹರಿದುಬಂದಿದ್ದು ಅನ್ನದಾನದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ.

ಜೂನ್ 26ರಿಂದ 29ರವರೆಗೆ ಆಯೋಜಿಸಲಾಗಿದ್ದ ಉರೂಸ್‌ನ ಅಂತಿಮ ದಿನದ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ನಿರೀಕ್ಷೆಗೂ ಮೀರಿ ಜನ ಬಂದಿದ್ದರು. ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಹಲವು ಮಂದಿ ಅಸ್ವಸ್ಥರಾಗಿದ್ದು ಕೆಲವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಕೆಲವು ಮಂದಿ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. 75 ಸಾವಿರಕ್ಕೂ ಹೆಚ್ಚು ಮಂದಿ ಉರೂಸ್ ಸಮಾರಂಭಕ್ಕೆ ಬಂದಿದ್ದು ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು ಎಂದು ವರದಿಯಾಗಿದೆ.

11 ಮಂದಿಗೆ ಚಿಕಿತ್ಸೆ: ಡಾ.ದೀಪಕ್ ರೈ

ಅಸ್ವಸ್ಥರಾದ ಐವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದಿದ್ದು ಈ ಪೈಕಿ ನಾಲ್ವರು ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ. ಓರ್ವ ಮಹಿಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಆರು ಮಂದಿಗೆ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ.


Share with