ಪೈವಳಿಕೆ: ಪೈವಳಿಕೆ ಪಂಚಾಯತ್‌ನ 19ನೇ ವಾರ್ಡ್ ಚಿಪ್ಪಾರುನಲ್ಲಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ಅದು ಯೋಗ್ಯವಲ್ಲವೆಂದು ಅಧಿಕಾರಿಗಳು ಹೇಳಿ ಹಲವು ವರ್ಷ ಕಳೆದರೂ ನೂತನ ಕಟ್ಟಡ ನಿರ್ಮಾಣಕ್ಕೆ ಮೀನ-ಮೇಷ ಎಣಿಸುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ.
ಇದೀಗ ಅವ್ಯವಸ್ಥೆ ಹೊಂದಿರುವ ಅಮ್ಮೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದೆ. ಆದರೆ ಇಲ್ಲಿ ಸರಿಯಾದ ದಾರಿಯ ಸೌಕರ್ಯ ಇಲ್ಲದಿರುವುದರಿಂದ ಮಕ್ಕಳ ಸಂಖ್ಯೆ ತೀರಾ ಕಡಿಮೆಗೊಂಡಿರುವುದಾಗಿ ಊರವರು ತಿಳಿಸಿದ್ದಾರೆ. ಈ ಹಿಂದೆ ಅಧಿಕಾರಿಗಳು ಅಂಗನವಾಡಿಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಅಂಗನವಾಡಿಕಟ್ಟಡ ಅಪಾಯವಿದೆ ಎಂದು ತಿಳಿಸಿ ತೆರಳಿದ್ದರು. ಆದರೆ ನೂತನ ಕಟ್ಟಡ ಮಂಜೂರುಗೊಂಡಿರುವುದಾಗಿ ಹೇಳಾಗುತ್ತಿದ್ದರೂ ಇದುವರೆಗೂ ನಿರ್ಮಾಣದ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂಬುದಾಗಿ ಊರವರು ತಿಳಿಸಿದ್ದಾರೆ.
ಈ ಅಂಗನವಾಡಿಗೆ ದಿ. ಅಹಮ್ಮದ್ ಹಾಜಿ ಖಂಡಿಗೆ ಇವರು ಸ್ಥಳ ದಾನ ಮಾಡಿದ್ದು, 1999ರಲ್ಲಿ ದಿ ಐತ್ತಪ್ಪ ಶೆಟ್ಟಿಗಾರ್ ಚಿಪ್ಪಾರ್ ರವರು ಅಂಗನವಾಡಿ ಕಟ್ಟಡವನ್ನು ಉದಾರವಾಗಿ ನಿರ್ಮಿಸಿದ್ದರು. ಬಳಿಕ ಸರಕಾರಕ್ಕೆ ಹಸ್ತಾಂತರಿಸಿರುವುದಾಗಿ ಊರವರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದೀಗ ತಾತ್ಕಾಲಿಕವಾಗಿ ಅವ್ಯವಸ್ಥೆಯಲ್ಲಿರುವ ಕಟ್ಟಡದಿಂದ ಅಂಗನವಾಡಿಯನ್ನು ವ್ಯವಸ್ಥಿತ ರೀತಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಹಾಗೂ ನೂತನ ಕಟ್ಟಡವನ್ನು ಶೀಘ್ರವಾಗಿ ನಿರ್ಮಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.