ಉಡುಪಿ: ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆ ಮಾಡಿರುವ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ ಎಂದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.+
ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತವಾಗಿ ಇಟ್ಟವರು ಅಡ್ವಾಣಿ. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದ್ದಾರೆ. ಶ್ರೀ ವಿಶ್ವೇಶತೀರ್ಥರ ಜೊತೆ ವಿಶೇಷ ಒಡನಾಟ ಇತ್ತು. ಈ ವಯಸ್ಸಿನಲ್ಲೂ ಅಡ್ವಾಣಿ ಅವರ ಶೃದ್ಧೆ ಮೆಚ್ಚುವಂಥದ್ದು. ಅಡ್ವಾಣಿ ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ ಎಂದರು.
ಸಾಮಾನ್ಯ ಕಾರ್ಯಕರ್ತನಾಗಿ ಹುಟ್ಟಿ ದೊಡ್ಡ ರಾಜಕಾರಣಿಯಾಗಿ ಬೆಳೆದವರು. ಉಪ ಪ್ರಧಾನಿ ಗೃಹ ಇಲಾಖೆ, ಹಾಗೂ ವಾರ್ತಾ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲ ಅವರು ಓರ್ವ ಧಾರ್ಮಿಕ ಪ್ರಜ್ಞೆ ಇರುವ ವ್ಯಕ್ತಿ. ನಾನು ಅಯೋಧ್ಯ ರಾಮ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಾಸ್ಥನಾದಾಗ ಅಡ್ವಾಣಿಯವರನ್ನು ಭೇಟಿಯಾಗಿದ್ದೆ. ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಬಂದಿದ್ದೆ. ಅಡ್ವಾಣಿ ಓರ್ವ ವಿನಯವಂತ ರಾಜಕಾರಣಿ. ಇಳಿ ವಯಸ್ಸಿನಲ್ಲೂ ಬಾಗಿಲವರೆಗೆ ಬಂದು ನನ್ನನ್ನು ಬೀಳ್ಕೊಟ್ಟು ಹೋಗಿದ್ದರು. ರಾಮ ಮತ್ತು ಕೃಷ್ಣ ದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ಹಾರೈಸಿದರು.