ಪುತ್ತೂರು: ಅಪರೂಪದ ಹಾವೊಂದು ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬುವವರ ಮನೆಯ ಟೇಬಲ್ ಮೇಲೆ ಹರಿದಾಡುತ್ತಿದ್ದು, ಹಾವನ್ನು ʼಪಾರೆಸ್ಟಿನ್ ಕ್ಯಾಟ್ ಸ್ನೇಕ್ʼ(ಬೆಕ್ಕು ಕಣ್ಣಿನ ಹಾವು) ಎಂದು ಗುರುತಿಸಲಾಗಿದೆ.
ಪುತ್ತೂರಿನ ಯುವ ಉರಗತಜ್ಞ ತೇಜಸ್ ಬನ್ನೂರು ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಹಾವನ್ನು ನೋಡಿದ ಉರಗತಜ್ಞ ತೇಜಸ್ ಅವರು ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪವಾಗಿದ್ದು, ಈ ಹಾವುಗಳು ಹೆಚ್ಚಾಗಿ ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳಲ್ಲಿ ಅಪರೂಪವಾಗಿ ಕಾಣಸಿಗುತ್ತವೆ. ಹಾವಿನ ಕಣ್ಣಿನಿಂದಲೇ ಈ ಹಾವುಗಳಿಗೆ ಬೆಕ್ಕು ಕಣ್ಣಿನ ಹಾವು ಎಂದು ಹೆಸರು ಬಂದಿದ್ದು, ಇವು ರಾತ್ರಿ ವೇಳೆಯಲ್ಲಿ ಸಂಚರಿಸುತ್ತವೆ. ವಿಷಕಾರಿಯಲ್ಲದ ಈ ಹಾವುಗಳು ತನ್ನ ರಕ್ಷಣೆಗಾಗಿ ಕಚ್ಚುತ್ತದೆ ಎಂದು ತಿಳಿಸಿದ್ದಾರೆ.