ಉಡುಪಿ: ರಸ್ತೆಯ ಇಕ್ಕೆಲಗಳಲ್ಲಿ ಸೇರಿರುವ ಸಾವಿರಾರು ಜನರು ಹರ್ಷೋದ್ಘಾರ ನಡೆಸುತ್ತಿದ್ದರೆ ಕಪ್ಪು ಕಾರಿನಲ್ಲಿ ಬಿಳಿ ಕುರ್ತಾ ಕಪ್ಪು ಜಾಕೆಟ್ ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕೈ ಬೀಸಿ ಬರುತ್ತಿದ್ದಾರೆ. ಇದು ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಝಲಕ್.

ಬಿಗಿ ಭದ್ರತೆಯ ನಡುವೆ ಪ್ರಧಾನಿ ಮೋದಿ ಕೈ ಬೀಸಿ ರೋಡ್ ಶೋನಲ್ಲಿ ಭಾಗವಹಿಸಿದರು. ಸೇರಿದ್ದ ಸಾವಿರಾರು ಜನರು ಪ್ರಧಾನಿ ಮೋದಿ ಅವರನ್ನು ಹತ್ತಿರದಲ್ಲಿ ಕಂಡು ಪುಳಕಿತರಾದರು.
ಸೇನಾ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಮೋದಿ ಉಡುಪಿಗೆ ಬಂದರು. ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಸ್ವಾಗತಿಸಿದರು. ಅಲ್ಲಿಂದ ಪ್ರಧಾನಿ ಮೋದಿ ಅವರು ಅಲ್ಲಿಂದ ಬನ್ನಂಜೆ ಮಾರ್ಗವಾಗಿ ಉಡುಪಿ ನಗರಕ್ಕೆ ಆಗಮಿಸಿದರು.
ಬನ್ನಂಜೆ ನಾರಾಯಣ ಗುರು ವೃತ್ತದಿಂದ ಪ್ರಧಾನಿ ರೋಡ್ ಶೋ ಆರಂಭವಾಯಿತು. ಸಿಟಿ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಕಲ್ಸಂಕವರೆಗೆ ನಡೆಯಿತು.
ಕಣ್ಣನ ಸೆಳೆದ ಸಾಂಸ್ಕೃತಿಕ ವೈಭವ
ರೋಡ್ ಶೋ ದಾರಿಯುದ್ದಕ್ಕೂ ಸಾಂಸ್ಕೃತಿಕ ವೈಭವ ಮೇಲೈಸಿತ್ತು. ಕರಾವಳಿ ಕರ್ನಾಟಕದ ಹೆಮ್ಮೆಯಾದ ಯಕ್ಷಗಾನ, ಹುಲಿವೇಷ ಮತ್ತು ಇತರ ಸಾಂಸ್ಕೃತಿಕ ತಂಡಗಳು ಪ್ರದರ್ಶನ ನೀಡಿದವು.




