ಮಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಚೈತ್ರ ಮತ್ತು ಗ್ಯಾಂಗ್ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚೈತ್ರ ಕುಂದಾಪುರ ಹಾಗೂ ನಮ್ಮ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೈತ್ರ ಕುಂದಾಪುರ ಅವರು ಉತ್ತಮ ಭಾಷಣ ಮಾಡುತ್ತಿದ್ದರಿಂದ ಕಾರ್ಯಕ್ರಮಕ್ಕೆ ಆಕೆಗೆ ಆಹ್ವಾನ ನೀಡಲಾಗುತ್ತಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ, ತಪ್ಪು ಯಾರೇ ಮಾಡಿದ್ದರೂ ಕೂಡ ಶಿಕ್ಷೆ ಆಗಲೇಬೇಕು. ನಮ್ಮ ಸಂಘಟನೆಯು ಈ ರೀತಿಯ ವಿಚಾರಗಳಿಗೆ ಹಾಗೂ ಘಟನೆಗಳಿಗೆ ಆಸ್ಪದವನ್ನು ಕೊಡುವುದಿಲ್ಲ. ಇಂತಹ ಯಾವುದೇ ಪ್ರಕರಣಗಳಿಗೆ ಸಹಕಾರವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳವು ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದೇಹಿ ಮಠದ ಸ್ವಾಮೀಜಿಗಳು ನನ್ನ ಗಮನಕ್ಕೆ ತಂದಿದ್ದರು. ಎರಡು ತಿಂಗಳ ಹಿಂದೆಯೇ ನನಗೆ ಈ ಕುರಿತಾಗಿ ಕರೆ ಮಾಡಿ ತಿಳಿಸಿದ್ದರು. ಅವರಿಗೆ ನಾನು ನೀವು ತಪ್ಪು ಮಾಡಿಲ್ಲವೆಂದರೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದೆ ಎಂದರು.