ದೆಹಲಿ: ಬಿಜೆಪಿ ಪಕ್ಷ ರಾಷ್ಟ್ರೀಯ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹುದ್ದೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬಿಜೆಪಿ ಮೂಲಗಳ ತಿಳಿಸಿದೆ. ಇಂದು (ಜು.29) ಈ ಕುರಿತಂತೆ ಬಿಜೆಪಿ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. 3 ಉಪಾಧ್ಯಕ್ಷರು, ಒಂಬತ್ತು ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ 13 ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. ಇನ್ನೂ ಕೆಲವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿದ್ದು, ಇನ್ನೂ ಅನೇಕ ನಾಯಕರನ್ನು ಕೈಬಿಡಲಾಗಿದೆ.
ಬಂಡಿ ಸಂಜಯ್, ಅನಿಲ್ ಆಂಟೋನಿ ಮತ್ತು ಕಾಮಾಖ್ಯ ಪಿ ತಾಸಾ ಸೇರಿದಂತೆ ಹೊಸ ಮುಖಗಳಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದ್ದು. ಸಿಟಿ ರವಿ, ದಿಲೀಪ್ ಘೋಷ್, ದಿಲೀಪ್ ಸೈಕಿಯಾ ಮತ್ತು ಸುನೀಲ್ ದಿಯೋಧರ್ ಅವರನ್ನು ಪ್ರಮುಖ ಹುದ್ದೆಗಳಿಂದ ಕೈಬಿಟ್ಟಿದೆ.
ಇನ್ನೂ ಉತ್ತರ ಪ್ರದೇಶದ ಎಂಎಲ್‌ಸಿ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ತೆಲಂಗಾಣ ಬಿಜೆಪಿಯ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಇತ್ತಿಚೇಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಅವರನ್ನೂ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.