ಬಂಟ್ಚಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ ರೋಡು ಇದರ ಆಶ್ರಯದಲ್ಲಿ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದಲ್ಲಿ 4 ದಿನಗಳ ಕಾಲ ಆರಾಧಿಸಲ್ಪಟ್ಟ ಸಾರ್ವಜನಿಕ ಶ್ರೀಗಣೇಶನ ಶೋಭಾಯಾತ್ರೆಯು ಶುಕ್ರವಾರ ಸಂಜೆ ಬಿ.ಸಿ ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದ್ದೂರಿಯಾಗಿ ನಡೆಯಿತು.
ವಿಸರ್ಜನಾ ಪೂಜೆಯ ಬಳಿಕ ಹೊರಟ ಶ್ರೀ ಗಣೇಶನ ಶೋಭಾಯಾತ್ರೆ ತಲಪಾಡಿಯ ಗಣಪತಿ ಕಟ್ಟೆಯ ತನಕ ಸಾಗಿ ಅಲ್ಲಿಂದ ವಾಪಾಸ್ ಅದೇ ದಾರಿಯಾಗಿ ಬಂದು ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದ ಕೀಲುಕುದುರೆ, ಯಕ್ಷಗಾನ ಗೊಂಬೆ, ಗೊಂಬೆ ಕುಣಿತ, ಸ್ಯಾಕ್ಸೋಪೋನ್, ಬ್ಯಾಂಡ್, ಚೆಂಡೆ ವಾದನ, ನಾಸಿಕ್ ಬ್ಯಾಂಡ್, ಹುಲಿ ವೇಷಗಳ ಅಬ್ಬರ, ವಿವಿಧ ಸಂಘ ಸಂಸ್ಥೆಗಳ ಸ್ತಬ್ದ ಚಿತ್ರ, ಟ್ಯಾಬ್ಲೋ, ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರಗನ್ನು ನೀಡಿತು. ಪೈಬರ್ ಮೋಲ್ಡ್ ನ ವಿಭಿನ್ನ ವೇಷ ಭೂಷಣ, ಮಕ್ಕಳ ಕುಣಿತ ಭಜನೆ ಎಲ್ಲಾರ ಗಮನ ಸೆಳೆದವು.
ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ, ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತರು ಶೋಭಾಯತ್ರೆಯನ್ನು ಕಣ್ತುಂಬಿಕೊಂಡರು. ಬಂಟ್ವಾಳ ನಗರ ಪೊಲೀಸರು ಬಂದೋ-ಬಸ್ತ್ ಏರ್ಪಡಿಸಿದ್ದರು.