ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣ; ಕೇರಳದ ಕುಖ್ಯಾತ ದರೋಡೆಕೋರರ ತಂಡದ ಕೃತ್ಯ!!

Share with

ಪೆರೋಲ್‌ನಲ್ಲಿ ಬಂದವನೂ ಭಾಗಿ?

ಪುತ್ತೂರು: ಕೆಲ ದಿನಗಳ ಹಿಂದೆ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ರಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮ೦ದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಪೊಲೀಸರು ಇದನ್ನು ಖಚಿತ ಪಡಿಸಿಲ್ಲ.

ಕೇರಳದ ಕುಖ್ಯಾತ ದರೋಡೆಕೋರರ ತಂಡ ಈ ಕೃತ್ಯ ಎಸಗಿದೆ. ಕೆಲ ದಿನಗಳ ಹಿಂದೆ ಸೀತಂಗೋಳಿ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವರ್ಷಗಳ ಹಿಂದೆ ಗುರುಪ್ರಸಾದ್‌ ರೈಯವರ ಮನೆಗೆ ವಾಹನವೊಂದರಲ್ಲಿ ಚಾಲಕನಾಗಿ ಬಂದಿದ್ದ ವ್ಯಕ್ತಿಯೋರ್ವ ಗುರುಪ್ರಸಾದ್ ರೈಯವರ ಮನೆಯ ವಿಷಯವನ್ನು ತಿಳಿದುಕೊಂಡು ದರೋಡೆ ತಂಡಕ್ಕೆ ಮಾಹಿತಿ ನೀಡಿ ಬಳಿಕ ಆತನೂ ಸೇರಿ ತಂಡ ಈ ಕೃತ್ಯ ಎಸಗಿದೆ. ಸೆ.6ರಂದು ರಾತ್ರಿ ಕುದ್ಯಾಡಿ ಮನೆಯಲ್ಲಿ ದರೋಡೆ ನಡೆದಿತ್ತು. ಕೃತ್ಯ ಎಸಗುವ ಮೊದಲೂ ಒಂದು ದಿನ ರಾತ್ರಿ ತಂಡವೊಂದು ರಾತ್ರಿ ವೇಳೆ ಗುರುಪ್ರಸಾದ್‌ ರೈಯವರ ಮನೆಯ ಬಳಿ ಬಂದು ಬಾಗಿಲು ಬಡಿದು ಹೋಗಿದ್ದರು ಎನ್ನಲಾಗುತ್ತಿದೆ.

ಐವರು ದರೋಡೆಕೋರರ ತಂಡ ಸೆ.6ರಂದು ತಡರಾತ್ರಿ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿದ್ದರು. ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿದ್ದರು. ಹೋಗುವಾಗ ಗುರುಪ್ರಸಾದ್ ರೈ ಮತ್ತವರ ತಾಯಿಯ ಕಾಲು ಮುಟ್ಟಿ ಸಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದು, ಈ ಮನೆಯ ಋಣ ಹೊಂದಿರುವವರೇ ಯಾರೋ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿತ್ತು. ಮನೆಯ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆ ಮತ್ತು ಕೇರಳ ಮೂಲದ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ ಎನ್ನುವ ಬಲವಾದ ಸ೦ಶಯದೊಂದಿಗೆ ಪೊಲೀಸರ ಒಂದು ತಂಡ ಕೇರಳದಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆರೋಪಿಗಳ ಬಂಧನದ ಕುರಿತು ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.


Share with

Leave a Reply

Your email address will not be published. Required fields are marked *