ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದೆ. ಇಂದು(ಜೂನ್.28) ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ(37) ಮೃತ ವ್ಯಕ್ತಿ. ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಊಹಿಸೋಕೂ ಆಗ್ತಿಲ್ಲ, ಅರಗಿಸಿಕೊಳ್ಳೂಕೂ ಆಗುತ್ತಿಲ್ಲ. ಬಾಳಿ ಬದುಕ ಬೇಕಾದವರೇ ಅರ್ಧಕ್ಕೇ ಜೀವನದ ಆಟ ಮುಗಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಹೃದಯಾಘಾತ ಇನ್ನಿಲ್ಲದಂತೆ ಕಾಡುತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರನ್ನೂ ಬಿಡುತ್ತಿಲ್ಲ. ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈವರೆಗೆ ಹೃದಯಾಘಾತಕ್ಕೆ ಮೃತಪಟ್ಟವರು
ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್ ಬೆಂಗಳೂರಿನಲ್ಲಿ ಉಸಿರು ನಿಲ್ಲಿಸಿದ್ರೆ, ಅದೇ ದಿನ ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂದ್ಯಾ ಬಲಿ ಆಗಿದ್ದರು. ಮೇ 28 ರಂದು ಕವನ ಉಸಿರು ನಿಲ್ಲಿಸಿದ್ದರು.
ಇನ್ನು ಜೂನ್ 11 ರಂದು ನಿಶಾಂತ್, ಜೂನ್ 12 ರಂದು ನಾಗಪ್ಪ, ಅದೇ ದಿನ ನೀಲಕಂಠಪ್ಪ ಕೂಡ ಸಾವಿನ ಮನೆ ಸೇರಿದ್ದರು. ಜೂನ್ 13 ರಂದು ದೇವರಾಜ್, ಅಂದೇ ಸತೀಶ್ ಅನ್ನೋರು ಜೀವ ಬಿಟ್ಟಿದ್ದರು. ಜೂನ್ 14 ರಂದು ಕಾಂತರಾಜು ಬಲಿ ಆಗಿದ್ದರು. ಜೂನ್ 18 ರಂದು ನವೀನ್, ತೀರ್ಥಪ್ಪ ಸಾವನ್ನಪ್ಪಿದ್ದರು. ಜೂನ್ 21 ರಂದು ನಿಶಾದ್ ಅಹ್ಮದ್ ಮತ್ತು ಚೇತನ್ ಹೃದಯಾಘಾತದಿಂದ ಉಸಿರು ಚೆಲ್ಲಿದ್ದರು.
ಜೂ.25 ರಂದು ಯೋಗೇಶ್.ಎಂ.ಕೆ, ಮಂಜುನಾಥ್, ಜೂ.26 ರಂದು 22 ವರ್ಷದ ಸುಪ್ರೀತಾ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಾವನ್ನಪ್ಪಿದ್ದಾರೆ. ಜೂ.28 ಗೋವಿಂದ (37) ಮೃತಪಟ್ಟಿದ್ದಾರೆ. ಎದೆ ನೋವನ್ನ ನಿರ್ಲಕ್ಷಿಸದೇ ಪರೀಕ್ಷಿಸಿ ಕೊಂಡರೆ ಸಾವುಗಳನ್ನ ತಡೆಯಬಹುದು ಎಂದು ಹೃದಯ ತಜ್ಞ ಆಶ್ರಿತ್ ಶ್ರೀದರ್ ಸಲಹೆ ನೀಡಿದ್ದಾರೆ.