ವಯನಾಡ್ (ಕೇರಳ): ವಯನಾಡ್ ಜಿಲ್ಲೆಯ ಮುಂಡ-ಚೂರಲ್‌ಮಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸ್ಥಳೀಯರಿಗೆ ಪ್ರವಾಹ ಭೀತಿ ಎದುರಾಗಿದೆ.
ಇದೇ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಸಂಭವಿಸಿದ ಭೂ ಕುಸಿತದಲ್ಲಿ 200 ಜನರ ಮೃತಪಟ್ಟಿದ್ದರು.
ಜಿಲ್ಲಾ ಅಧಿಕಾರಿಗಳು ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಚೂರಲ್‌ಮಲ ನದಿಯ ಮಣ್ಣುಮಿಶ್ರಿತ ನೀರು ಬೈಲೆ ಸೇತುವೆ ಬಳಿಯ ನದಿ ದಂಡೆಗಳಲ್ಲಿ ರಭಸವಾಗಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ದುರಸ್ತಿ ಕಾಮಗಾರಿಗಳಿಗಾಗಿ ಸಂಗ್ರಹಿಸಿದ್ದ ಮಣ್ಣು ಕೂಡ ಕೊಚ್ಚಿ ಹೋಗುತ್ತಿದ್ದು, ಅಟ್ಟಮಲ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೀರು ಆವರಿಸುತ್ತಿದೆ’ ಎಂದಿದ್ದಾರೆ.
ಪುಂಚಿರಿಮಟ್ಟಂ ಅರಣ್ಯ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ನಡೆದಿದ್ದ ದುರಂತದ ವೇಳೆ ಉಳಿದಿರುವ ಅವಶೇಷಗಳು ಈಗ ಮಳೆ ನೀರಿನೊಂದಿಗೆ ಕೆಳಭಾಗಕ್ಕೆ ಬರುತ್ತಿವೆ. ಆದರೆ, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಕಬನಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಾನಾಸುರ ಜಲಾಶಯವು ತುಂಬುವ ಮಟ್ಟಕ್ಕೆ ಬಂದಿರುವ ಕಾರಣದಿಂದ ಸುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ವಯನಾಡ್ ಸೇರಿದಂತೆ 11 ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣಕ್ಕೆ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಕೂಡ ಘೋಷಿಸಿದೆ.