ದಕ್ಷಿಣ ಕನ್ನಡ: ಗಣೇಶ ಚತುರ್ಥಿ ದೇಶದೆಲ್ಲೆಡೆ ಸಾರ್ವತ್ರಿಕವಾಗಿ ಆಚರಿಸುವ ಹಬ್ಬ. ಆದರೆ ಅಂತಹ ಹಬ್ಬಕ್ಕೆ ರಜೆಯ ಗೊಂದಲ ಎದುರಾಗಿದೆ. ಈ ಬಾರಿಯ ಶ್ರೀ ಗಣೇಶ ಚತುರ್ಥಿ ಹಬ್ಬ ಸೆ.19 ರಂದು ಇದ್ದು ಆ ದಿನ ಸಾರ್ವತ್ರಿಕ ರಜೆ ಇಲ್ಲದೇ ಒಂದು ದಿನ ಮೊದಲೇ ಅಂದರೆ ಸೆ.18 ರಂದು ಸರಕಾರದ ಕ್ಯಾಲೆಂಡರ್‌ನಲ್ಲಿ ರಜೆ ಉಲ್ಲೇಖವಾಗಿದೆ.! ಆದ್ದರಿಂದ ಕರ್ತವ್ಯದ ದಿನದಲ್ಲಿ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಕರಾವಳಿ ಭಾಗದಲ್ಲಿ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ರಾಜ್ಯ ಸರಕಾರ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನದ ಪಟ್ಟಿಯಲ್ಲಿ ಸೆ.18 ರಂದು ವರಸಿದ್ಧಿವಿನಾಯಕ ವೃತ ರಜೆ ಎಂದು ಇದೆ. ಪಂಚಾಂಗ ಪ್ರಕಾರ ಸೆ.18 ರಂದು ಗೌರಿ ತದಿಗೆ ಹಾಗೂ ಗಣೇಶ ಚತುರ್ಥಿ ಸೆ.19 ರಂದು ಇದೆ. ಕರಾವಳಿ ಭಾಗದಲ್ಲಿ ಗಣೇಶ ಚತುರ್ಥಿ ಹಬ್ಬವು ಸೆ.19 ರಂದು ನಡೆಯುವ ಕಾರಣದಿಂದ ರಜೆಯ ವಿಚಾರವು ಗೊಂದಲಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆಯನ್ನು ಸೆ.19ರಂದು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ “ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರ ತೀರ್ಮಾನ ಮಾಡಬೇಕಾಗುತ್ತದೆ” ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.