ಬೆಳ್ತಂಗಡಿ: ಬಹಳ ನಿರೀಕ್ಷೆಯಿಂದ ಜನ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದರು. ಆದರೆ ಅತ್ಯಂತ ಸಣ್ಣ ಅವಧಿಯಲ್ಲಿ ಜನ ಈ ಸರ್ಕಾರದ ಮೇಲಿದ್ದ ಭರವಸೆಯನ್ನು ಕಳೆದುಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕಾಂಗ್ರೆಸ್ ಪಂಚಾಯತ್ ಮಟ್ಟದಲ್ಲಿ ಮದ್ಯದ ಅಂಗಡಿ ತೆರೆಯುವ ದಿಕ್ಕಿನಲಿ ಹೆಜ್ಜೆ ಇಟ್ಟಿದೆ ಮದ್ಯದ ಹಣದಲ್ಲಿ ಸರಕಾರ ನಡೆಸಬೇಕಾದ ದುಸ್ಥಿತಿಗೆ ಸರಕಾರ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
ಅವರು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ ಎಂದು ಹೇಳುವ ಸರ್ಕಾರ ಇವತ್ತು ತನ್ನ ರಾಜಕೀಯ ಲಾಭದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯ ಮಾರಾಟದ ಹಾದಿ ಹಿಡಿದಿರುವುದು ವಿಷಾದನೀಯ. 1000 ಮದ್ಯದಂಗಡಿಯನ್ನು ಕರ್ನಾಟಕದ ಉದ್ದಗಲಕ್ಕೆ, ಗ್ರಾಮಾಂತರ ಪ್ರದೇಶಕ್ಕೆ, ಪಂಚಾಯತ್ ಮಟ್ಟದಲ್ಲೂ ತೆರೆಯುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. 5 ಗ್ಯಾರಂಟಿಗಳನ್ನು ಹೇಳಿ ಜನರನ್ನು ತಪ್ಪುದಾರಿಗೆ ಕೊಂಡು ಹೋಗಿ ಆರ್ಥಿಕವಾಗಿ ಈ ಹೊರೆಯನ್ನು ಭರಿಸಲಾಗದೆ ಮದ್ಯದ ವ್ಯವಹಾರವನ್ನು ಪ್ರಾರಂಭ ಮಾಡಿರುವುದು ಕಾಂಗ್ರೆಸ್ನ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣವಾಗಿ ಈ ಗ್ಯಾರಂಟಿಯ ಹೊರೆಯ ಭಾರವನ್ನು ಹೊರುವುದರಲ್ಲೇ ಮುಳುಗಿರುವ ಸರಕಾರ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ, ಬರದ ಪರಿಸ್ಥಿತಿ ಇದೆ, ವಿದ್ಯುತ್ ಉತ್ಪಾದನೆಯ ಕೊರತೆಯಿದೆ ಈ ಯಾವುದೇ ಜನರ ಸಮಸ್ಯೆಗಳಿಗೆ ಸ್ಪಂದನೆ ಕೊಡುವ ದಿಕ್ಕಿನಲ್ಲಿ ಪೂರ್ವ ತಯಾರಿ ಮಾಡಿಕೊಂಡಿಲ್ಲ ಎಂದರು.
ಕಾವೇರಿ ವಿವಾದದ ವ್ಯವಹರಣೆಯಲ್ಲಿ ಈ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಜನರಿಗೆ ಕುಡಿಯುವ ನೀರು, ರೈತರ ಬೆಳೆಗೆ ನೀರು ನೀಡಲಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ ಸರ್ಕಾರ ನೀರಿನ ಬದಲಿಗೆ ಮದ್ಯವನ್ನು ಮನೆ ಮನೆಗೆ ಹಂಚಲು ಯೋಚಿಸಿದೆ. ಮಹಾತ್ಮ ಗಾಂಧೀಜಿಯ ಹೆಸರನ್ನು ಹೇಳಿ ದಿನ ತೆಗೆಯುವ ಕಾಂಗ್ರೆಸ್ಗೆ ಗಾಂಧೀಜಿ ಹೆಸರು ಮಾತ್ರ ಬೇಕು ಅವರ ವಿಚಾರ ಬೇಡ, ಜನ ಸಾಮಾನ್ಯರ ಕಾಳಜಿ ಇಲ್ಲವೆಂಬುದನ್ನು ಈ ಸರಕಾರ ಮದ್ಯದಂಗಡಿ ಮೂಲಕ ತೋರಿಸುತ್ತಿದೆ ಎಂದರು.
ಲೋಕಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ತಳಮಳ ಶುರುವಾಗಿದೆ. ಇಂಡಿಯಾಗೆ ಬಿಜೆಪಿಯನ್ನು ಸೋಲಿಸುವ ಒಂದೇ ಉದ್ದೇಶ. ದೇಶದ ಅಭಿವೃದ್ದಿಯ ಜನರ ಅಭಿವೃದ್ಧಿಯ ಆಲೋಚನೆಯಿಲ್ಲ ಇಂತಹ ಒಕ್ಕೂಟವನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದರು.