ಉಡುಪಿ: ದುಡಿಯುವ ಮಕ್ಕಳಿಗೆ ನ್ಯಾಯಾಧೀಶೆಯ ಮನ ಮಿಡಿದಿದೆ. ಮಧ್ಯಾಹ್ನ ನಗರದ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಹೊರ ರಾಜ್ಯದ ಮಹಿಳೆಯೊಬ್ಬರು ಇಬ್ಬರು ಪುಟಾಣಿ ಮಕ್ಕಳ ಮೂಲಕ ರಸ್ತೆಯಲ್ಲಿ ಕಲಾಕೃತಿಯುಳ್ಳ ಸಣ್ಣ ಪುಸ್ತಕಗಳನ್ನು ಮಾರಾಟ ಮಾಡಿಸುತ್ತಿದ್ದರು.
ಇದನ್ನು ಗಮನಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ.ಎಸ್ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ, ಮಕ್ಕಳನ್ನು ರಕ್ಷಿಸಿದ್ದಾರೆ. ಹಿರಿಯ ಸಿವಿಲ್ ನ್ಯಾಯಧೀಶೆ ಮಹಿಳೆಯನ್ನು ಪ್ರಶ್ನಿಸಲು ಆರಂಭಿಸಿದಾಗ, ಕಣ್ಣೀರಿಡುತ್ತಾ ಮಾತು ಆರಂಭಿಸಿದ ಮಹಿಳೆ, ಹೊಟ್ಟೆಗೆ ತಿನ್ನಲು ಸರಿಯಾದ ವ್ಯವಸ್ಥೆ ಇಲ್ಲ. ಅದಕ್ಕಾಗಿ ಸಣ್ಣ ಕಲಾಕೃತಿಯುಳ್ಳ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಗದ್ಗದಿತವಾಗಿ ಉತ್ತರಿಸುತ್ತಾ ಸುತ್ತಲು ಸೇರಿದ್ದವರ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು.
ಬೆಳಗ್ಗಿನಿಂದಲೇ ಮಹಿಳೆಯೂ ಇಬ್ಬರು ಮಕ್ಕಳ ಮೂಲಕ ವ್ಯಾಪರ ನಡೆಸುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಅವರು, ಮಹಿಳೆ ನೆರಳಲ್ಲಿ ಕೂತುಕೊಂಡಿದ್ದು, ವಾಹನಗಳು ಓಡಾಡುವ ರಸ್ತೆಯಲ್ಲಿ ಮಕ್ಕಳು ವಾಹನಕ್ಕೆ ಅಡ್ಡವಾಗಿ ಓಡಿ ಬರುತ್ತಾ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದನ್ನು ಗಮನಿಸಿ, ಮಹಿಳಾ ಠಾಣೆ, ಮಕ್ಕಳ ರಕ್ಷಣಾ ಘಟಕ ಹಾಗು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.