
ನಿರಂತರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿರುವಂತಹ ಘಟನೆ ನಡೆದಿದೆ. ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿದ್ದಾರೆ. ನಾಲ್ವರನ್ನು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.
ಉಳ್ಳಾಲ ತಾಲೂಕಿನಲ್ಲಿ ಭಾರೀ ಮಳೆಗೆ ಎರಡು ಮನೆಗಳ ಮೇಲೆ ಗುಡ್ಡ ಕುಸಿದ್ದು, ಅಮಾಯಕ ಜೀವಗಳನ್ನು ಬಲಿ ಪಡಿದಿದೆ. ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿದ್ದಾರೆ (death). ಸುಮಾರು 10 ಗಂಟೆ ಕಾರ್ಯಾಚರಣೆ ನಡೆಸಿ ಇದುವರೆಗೆ ಒಟ್ಟು ನಾಲ್ವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದೆ.
ಕಾಂತಪ್ಪ ಪೂಜಾರಿ ಪುತ್ರ ಸೀತಾರಾಮ್ ಪೂಜಾರಿ ಬಚಾವ್ ಆಗಿದ್ದರು. ಇನ್ನು ಅವಶೇಷಗಳಡಿ ಸಿಲುಕಿ ನರಳಾಡುತ್ತಿದ್ದ ಅಶ್ವಿನಿ ಅವರನ್ನು ಇದೀಗ ರಕ್ಷಣೆ ಮಾಡಲಾಗಿದೆ.
ರಾತ್ರಿ 4.30 ರಸುಮಾರಿಗೆ ಮನೆ ಕುಸಿದಿದೆ. ಆದರೆ ಈ ಪ್ರದೇಶ ದುರ್ಗಮವಾಗಿರೋದ್ರಿಂದ ಜೆಸಿಬಿ ಆಗಲಿ, ವಾಹನ ಹೋಗಲು ಜಾಗ ಇರಲಿಲ್ಲ. ಮೇಲಾಗಿ ಮಳೆ ಕೂಡ ಸುರಿಯುತ್ತಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ರಾತ್ರಿಯಿಂದಲೇ ತಾಯಿ ಅಶ್ವಿನಿ ಮತ್ತು ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಆರುಷ್ ಅವಶೇಷಗಳಡಿ ಸಿಲುಕಿದ್ದರು.
ಅರೆ ಪ್ರಜ್ಞಾವಸ್ತೆಯಲ್ಲಿದ್ದ ಅಶ್ವಿನಿ ಗಂಡನಿಗೆ ಎಲ್ಲಿದ್ದೀರಾ, ಮಕ್ಕಳು ಎಲ್ಲಿವೆ ಅಂತಾ ಕೂಗುತ್ತಿದ್ದರು. ಏನೂ ಅರಿಯದ ಒಂದುವರೆ ವರ್ಷದ ಪುಟ್ಟ ಕಂದಮ್ಮ ಆರುಷ್ ಅಲ್ಲಿ ಏನಾಗ್ತಿದೆ ಅನ್ನೋದು ಅರಿವಿಲ್ಲದೆ ಕೈ ಆಡಿಸುತ್ತಾ ಕಿರುಚಾಡುತ್ತಿದ್ದ ದೃಶ್ಯ, ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.