ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆಗೆ ದೇಶ ವಿದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ತಪ್ಪಿತಸ್ಥರನ್ನು ಬಿಡುವುದಿಲ್ಲ , ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಕುಕಿ ಹಾಗೂ ಮೇಟಿ ಸಮುದಾಯದ ನಡುವಿನ ಹೋರಾಟ ಇಡೀ ರಾಜ್ಯವನ್ನೇ ಸುಟ್ಟಿದೆ. ಈ ಘಟನೆಗಳ ಬೆನ್ನಲ್ಲೇ ಇದೀಗ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಭಾರತವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಗೆ ಪ್ರಧಾನಿ ಮೋದಿ ಕೂಡ ಆಘಾತ ವ್ಯಕ್ತಪಡಿಸಿ, ಕಠಿಣ ಕ್ರಮಕ್ಕೆ ಸೂಚಿಸಿದ್ದರು.
ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೆರವಣಿಗೆ ವೇಳೆ ಮಹಿಳೆಯರನ್ನು ಬಲವಂತವಾಗಿ ಹಿಡಿದು ಸಾಗುತ್ತಿದ್ದ ಈ ಪ್ರಕರಣದ ಪ್ರಮುಖ ಆರೋಪಿ 32 ವರ್ಷದ ಹುರಿಯಮ್ ಹೆರೊದಾಸ್ ಮೇಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಇತರ ಆರೋಪಿಗಳಿಗೆ ಹುಡುಕಾಟ ತೀವ್ರಗೊಳಿಸಲಾಗಿದೆ.