ಬೆಂಗಳೂರು: ಆಹಾರ ತಜ್ಞ ಮತ್ತು ಲೇಖಕ ಕೆ.ಸಿ.ರಘು (60) ಅವರು ರವಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರು ಆಹಾರ ಆರೋಗ್ಯದ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ ಹಾಗೂ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಮಾಹಿತಿ ಹಂಚಿಕೊಳ್ಳುತ್ತಿದ್ದರು.
ಇವರು ಹಲವು ವರ್ಷಗಳ ಕಾಲ “ಫುಡ್ ಆ್ಯಂಡ್ ನ್ಯೂಟ್ರಿಷಿಯನ್ ವರ್ಲ್ಡ್’ ಪತ್ರಿಕೆಯ ಸಂಪಾದಕರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ್ದ ಪ್ರಿಸ್ಟೀನ್ ಅರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ನೀಡುತ್ತಿದ್ದರು.
ರಘು ಅವರ ಇಚ್ಛೆಯಂತೆ ಅವರ ದೇಹವನ್ನು ಎಂ.ಎಸ್ ರಾಮಯ್ಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ರಘು ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಹಲವು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.