ಬೆಳ್ತಂಗಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಬೆಳ್ತಂಗಡಿ ತಹಶೀಲ್ದಾರರ ಕಚೇರಿಯ ಎದುರು ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿ.ಎಂ.ಎಸ್. ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡುತ್ತಾ ಪ್ರಸ್ತುತ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಸಿಗುವ ಹಲವು ಸೌಲಭ್ಯಗಳನ್ನು ಕಡಿತ ಮಾಡುವ ಬಗ್ಗೆ ಯೋಜಿಸಿದೆ. ಇದನ್ನು ಭಾರತೀಯ ಮಜ್ದೂರ್ ಸಂಘ ದ ಕಟ್ಟಡ ಕಾರ್ಮಿಕ ಸಂಘಗಳಿಂದ ರಾಜ್ಯದಾದ್ಯಂತ ಇಂದು ಪ್ರತಿಭಟಿಸಲಾಗುತ್ತಿದೆ. ತಕ್ಷಣ ಕಡಿತ ಮಾಡುವ ನಿರ್ದಾರವನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದರು. ಮತ್ತು 2021 ಸಾಲಿನ ಬಾಕಿಯಾಗಿರುವ 1 ಲಕ್ಷ ಕಟ್ಟಡ ಕಾರ್ಮಿಕರ ಸ್ಕಾಲರ್ ಶಿಪ್ ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು, 2022-23ನೇ ಸಾಲಿನ ಸ್ಕಾಲರ್ ಶಿಪ್ ಗಳ ಶೀಘ್ರ ಕಾರ್ಮಿಕರಿಗೆ ಪಾವತಿಸಬೇಕು ಮತ್ತು ಕಾರ್ಮಿಕರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸರಿಯಾದ ಮರುಪಾವತಿಗೂ ಅವರು ಆಗ್ರಹಿಸಿದರು.
ಮಂಡಳಿಯಲ್ಲಿ ಅನಾವಶ್ಯಕ ಟೆಂಡರ್ ಕರೆದು ಮಂಡಳಿಯ ಹಣ ಪೋಲು ಮಾಡುವ ಯೋಜನೆ ಜಾರಿಗೆ ತರದೇ ಕಾರ್ಮಿಕರಿಗೆ ಅವಶ್ಯಕ ವಸತಿ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ತರಬೇಕೆಂದು ಅವರು ಆಗ್ರಹಿಸಿದರು. ಪ್ರತಿಭಟನೆಗೆ ಭಾಗವಹಿಸಿದ ಗಣ್ಯರನ್ನು ಮತ್ತು ಕಾರ್ಮಿಕ ಬಂಧುಗಳನ್ನು ತಾಲೂಕು ಬಿ.ಎಂ.ಎಸ್. ಅಧ್ಯಕ್ಷ ಉದಯ ಬಿ.ಕೆ ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಬಿಎಂಎಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಯು ಇವರು ಕಾರ್ಮಿಕರ ಸಮಸ್ಯೆಗಳನ್ನು ಕೂಡಲೆ ಪರಿಹರಿಸಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ಕಾರ್ಮಿಕರನ್ನು ಒಗ್ಗೂಡಿಸಿ ಜಿಲ್ಲೆ ಮತ್ತು ರಾಜ್ಯದಲ್ಲಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದರು.
ಉದಯ ಬಿ.ಕೆ ಧನ್ಯವಾದ ಸಮರ್ಪಿಸಿದರು. ಈ ಪ್ರತಿಭಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕ ನಿರ್ಮಾಣ ಸಂಘದ ಉಪಾಧ್ಯಕ್ಷರು ಗಣೇಶ್ ಪೂಜಾರಿ ಪೆರಾಡಿ, ಬಿ.ಎಂ.ಎಸ್. ಸಂಘದ ಮೂಡಬಿದ್ರೆ ಪ್ರಭಾರಿ ಪ್ರಮೋದ್ ರಾಜ್ ಪೆರಾಡಿ, ಬಿ.ಎಂ.ಎಸ್. ಬೆಳ್ತಂಗಡಿ ತಾಲೂಕು ಸಂಯೋಜಕರಾದ ಸಾಂತಪ್ಪ ಕಲ್ಮಂಜ ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷರು/ ಕಾರ್ಯದರ್ಶಿಗಳು, ತಾಲೂಕ್ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕರು ಭಾಗವಹಿಸಿದ್ದರು.