ಕೆಲ ವರ್ಷಗಳ ಹಿಂದೆ ಪ್ರಭಾಸ್ ನಟನೆಯ ರಾಮಾಯಣ ಆಧರಿಸಿದ ಸಿನಿಮಾ ‘ಆದಿಪುರುಷ್’ ಬಿಡುಗಡೆ ಆಗಿತ್ತು. ಆ ಸಿನಿಮಾ ಬಿಡುಗಡೆಗೆ ಮುಂಚೆ ಅದರ ಟೀಸರ್ ಬಿಡುಗಡೆ ಆಗಿತ್ತು. ಆಗ ಸಿನಿಮಾ ಬಹುವಾಗಿ ಟ್ರೋಲ್ ಆಗಿತ್ತು. ಅತ್ಯಂತ ಕೆಟ್ಟದಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದರ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು. ಕೊನೆಗೆ ಸಿನಿಮಾದ ಸೋಲಿಗೂ ಇದೇ ಕಾರಣವಾಯ್ತು. ಇಂದು (ಜುಲೈ 3) ಅದೇ ರಾಮಾಯಣ ಕತೆ ಆಧರಿಸಿದ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಅಥವಾ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ಕೇವಲ ಒಂದು ನಿಮಿಷದ ಟೀಸರ್ ಇದಾಗಿದ್ದು, ಇದರಿಂದಲೇ ತಿಳಿಯುತ್ತಿದೆ, ಇದು ಸಾಮಾನ್ಯ ಸಿನಿಮಾ ಅಂತೂ ಖಂಡಿತ ಅಲ್ಲವೆಂದು.ಗ್ಲಿಂಪ್ಸ್ ಅನ್ನು ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ವಿವಿಧ ನಗರಗಳಲ್ಲಿ ಬೇರೆ ಬೇರೆ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
‘ರಾಮಾಯಣ’ ಸಿನಿಮಾನಲ್ಲಿ ರಿಯಾಲಿಟಿ ಮತ್ತು ವಿಎಫ್ಎಕ್ಸ್ ಎರಡನ್ನೂ ಬಳಸಿ ಅದ್ಭುತ ಲೋಕವೊಂದನ್ನು ಸೃಷ್ಟಿ ಮಾಡಿರುವುದು ಟೀಸರ್ನಿಂದ ತಿಳಿದು ಬರುತ್ತಿದೆ. ಟೀಸರ್ನ ಒಂದು ದೃಶ್ಯದಲ್ಲಿ ‘ಅವತಾರ್’ನ ಪ್ಯಾಂಡೊರಾ ರೀತಿಯ ತೂಗು ದ್ವೀಪಗಳು, ಪುರಾತನ ದೇವಾಲಯಗಳು, ಹಿಮಾಲಯದ ಮೇಲೆ ವೇಗವಾಗಿ ಹಾರುತ್ತಿರುವ ಹನುಮ ಇನ್ನೂ ಹಲವು ದೃಶ್ಯಗಳನ್ನು ತೋರಿಸಲಾಗಿದೆ. ಒಟ್ಟಾರೆಯಾಗಿ ‘ರಾಮಾಯಣ’ ಸಿನಿಮಾನಲ್ಲಿ ರಾಮಾಯಣ ಕತೆಯನ್ನು ಹಿಂದೆಂದೂ ಯಾವ ಸಿನಿಮಾ, ಧಾರಾವಾಹಿಯೂ ಕಟ್ಟಿಕೊಡದ ರೀತಿಯಲ್ಲಿ ಕಟ್ಟಿಕೊಡುತ್ತಿರುವುದನ್ನು ಈಗ ಬಿಡುಗಡೆ ಆಗಿರುವ ಟೀಸರ್ ಖಾತ್ರಿ ಪಡಿಸಿದೆ.ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ.
ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಸುಮಾರು 800 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ನಟ ಯಶ್ ಅವರು ಈ ಸಿನಿಮಾನಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಹನ್ಸ್ಜೈಮರ್ ಸಂಗೀತ ನೀಡಿದ್ದಾರೆ. ಆಸ್ಕರ್ ವಿಜೇತ ಸ್ಟಂಟ್ ಕೋರಿಯೋಗ್ರಾಫರ್ ಸ್ಟಂಟ್ ಮಾಡಿದ್ದಾರೆ. ಹಾಲಿವುಡ್ನ ಪ್ರತಿಷ್ಠಿತ ಸ್ಟುಡಿಯೋಗಳು ವಿಎಫ್ಎಕ್ಸ್ ಕಾರ್ಯ ಮಾಡಿವೆ. ಸಿನಿಮಾ 2026ರ ದೀಪಾವಳಿಗೆ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ.