ಮಂಗಳೂರು: ಖಾಸಗಿ ಬಸ್ಸುಗಳ ಚಾಲಕರಿಂದ ನಿರ್ಲಕ್ಷ್ಯದ ಚಾಲನೆ, ನಿಯಮಗಳ ಉಲ್ಲಂಘನೆ ಮುಂದುವರಿಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್.ಟಿ.ಒ ಅಧಿಕಾರಿ, ಮ.ನ.ಪಾ ಇಂಜಿನಿಯರ್, ಎನ್.ಎಚ್.ಒ ಅಧಿಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸಿಟಿ ಬಸ್‌ಗಳ ಮಾಲೀಕರ ಜೊತೆ ಸಭೆಯನ್ನು ನಡೆಸಲಾಯಿತು.
ಇತ್ತೀಚಿಗೆ ನಡೆದ ವಿವಿಧ ಅಪಘಾತಗಳ ವೀಡಿಯೋಗಳನ್ನು ಬಸ್ ಮಾಲೀಕರಿಗೆ ತೋರಿಸಿ, ಅತೀ ವೇಗದ ಚಾಲನೆ, ನಿರ್ಲಕ್ಷ್ಯತನ, ಸಮಯ ಪರಿಪಾಲನೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಯಿತು. ಈ ವಿಷಯದಲ್ಲಿ ಬಸ್ ಮಾಲಕರು ತಮ್ಮ ಚಾಲಕ ಹಾಗೂ ನಿರ್ವಾಹಕರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಬೇಕು. ಚಾಲಕರು ನಿಯಮವನ್ನು ಪಾಲಿಸದಿದ್ದಲ್ಲಿ ಚಾಲನ ಪರವಾನಿಗೆಯನ್ನು ರದ್ದು ಗೊಳಿಸಲಾಗುವುದು.
ಈ ವರ್ಷ ಸುಮಾರು 90 ಮಂದಿಯ ಚಾಲನ ಪರವಾನಿಗೆ ರದ್ದು ಮಾಡಲಾಗಿದ್ದು, ಮುಂದೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ಬಸ್ಸಿನ ಪುಟ್ ಬೋರ್ಡ್ ಮೇಲೆ ಪ್ರಯಾಣಿಕರು ನಿಲ್ಲಲು ಅವಕಾಶವನ್ನು ನೀಡಬಾರದು ಹಾಗೂ ಫುಟ್ ಬೋರ್ಡ್‌ಗೆ ಬಾಗಿಲು ಹಾಕುವ ಬಗ್ಗೆ ಚಿಂತನೆ ನಡೆಸಬೇಕು. ಸಾರ್ವಜನಿಕರಲ್ಲೂ ಕೂಡ ಜಾಗೃತಿಯನ್ನು ಮೂಡಿಸಬೇಕಾಗಿದ್ದು, ರಸ್ತೆ ಕಾಮಗಾರಿಯಿಂದಾಗಿ ಅಪಘಾತ ಸಂಭವಿಸಿದ್ದು ಸಾಬೀತಾದರೆ ಆ ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಚರ್ಚಿಸಿರುವ ವಿವಿಧ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗಬೇಕು. ಮುಂದಿನ ತಿಂಗಳು ಮತ್ತೆ ಸಭೆ ಕರೆದು ಪರಿಶೀಲನೆ ನಡೆಸಲಾಗುವುದು. ಆದ್ದರಿಂದ ಆದಷ್ಟು ಶೀಘ್ರವಾಗಿ ನಿರ್ಣಯಿಸಿದ ವಿಚಾರ ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.