ಕುಂಬ್ಡಾಜೆ: ಧಾರ್ಮಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಸನಾತನೀಯ ಹಿಂದೂ ಧರ್ಮದ ಆಚರಣೆಯಾಗಿದ್ದರೂ ಏತಡ್ಕ ಸಮೀಪದ ವರುಂಬುಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಅಚರಣೆಯನ್ನು ಹಿಂದು ಮುಸ್ಲಿಂ ಕ್ರೈಸ್ತ ಬಾಂಧವರೆಲ್ಲಾ ಒಗ್ಗೂಡಿ ಧರ್ಮ ಸಾಮಾರಸ್ಯದ ಸಂದೇಶದೊಂದಿಗೆ ಆಚರಿಸುತ್ತಿರುವುದು ವಿಶೇಷತೆಯಾಗಿದೆ.

ಇಲ್ಲಿನ ಅಜ್ಜಿಮೂಲೆಯ ಜೈಗುರುದೇವ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ಬಿನ ನೇತೃತ್ವದಲ್ಲಿ ಕಳೆದ 33 ವರ್ಷಗಳಿಂದ ಯಶಸ್ವಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಕೇವಲ ಹಿಂದು ಧರ್ಮದವರು ಮಾತ್ರವಲ್ಲದೆ ಕ್ರೈಸ್ತರು ,ಮುಸ್ಲಿಂ ಬಾಂಧವರು ವಿವಿಧ ಸ್ಪರ್ಧೆ ಹಾಗೂ ಧಾರ್ಮಿಕ ಸಭೆಯಲ್ಲಿ ಸಕ್ರಿಯವಾಗಿರುವುದು ಈ ನಾಡಿನ ಸೌಹರ್ದತೆಯ ಪ್ರತೀಕವಾಗಿದೆ.

ವರ್ಷಂಪ್ರತಿಯಂತೆ ಈ ಬಾರಿಯೂ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಚುಟುಕು ಸಾಹಿತಿ ನರಸಿಂಹ ಭಟ್ ಕಟ್ಟದಮೂಲೆ ಉದ್ಘಾಟಿಸಿದರು. ಬಳಿಕ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆವಹಿಸುವರು. ಡಾ.ಶ್ರಿನಿಧಿ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂಬ್ಡಾಜೆ ಗ್ರಾ.ಪಂ.ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಬದಿಯಡ್ಕ ಗ್ರಾ.ಪಂ.ಸದಸ್ಯ ಹಮೀದ್ ಪಳ್ಳತ್ತಡ್ಕ, ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಕೃಷ್ಣಶರ್ಮ ಜಿ, ಕೃಷಿ ಕ್ಷೇಮ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ನಂಬ್ಯಾರ್,ನರಸಿಂಹ ಭಟ್, ಚಂದ್ರಶೇಖರ ಮಾಸ್ತರ್ , ಮಂಜುನಾಥ ಮಾಸ್ತರ್ ಮೊದಲಾದವರು ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ಅಜ್ಜಿಮೂಲೆ ಪ್ರದೇಶದ ರಸ್ತೆ ಅಭಿವೃದ್ಧಿ ,ಸೇತುವೆ ನಿರ್ಮಾಣ ಮೊದಲಾದ ನಾಡಿನ ಪ್ರಗತಿಯ ಕೆಲಸ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ಜೋನಿ ಕ್ರಾಸ್ತಾ ವರುಂಬೋಡಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೇಷ್ಮಾ ಹಾಗೂ ಅಕ್ಷತಾ ಪ್ರಾರ್ಥನೆಗೈದರು.ಜೋನಿ ಕ್ರಾಸ್ತಾ ಸ್ವಾಗತಿಸಿ ರಾಜೇಶ್ ಅಜ್ಜಿಮೂಲೆ ವಂದಿಸಿದರು.ಜಯ ಮಣಿಯಂಪಾರೆ ನಿರೂಪಿಸಿದರು. ರಾತ್ರೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ – ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.