ಪುತ್ತೂರು: ಭಕ್ತಕೋಡಿ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ. ಅಂಗನವಾಡಿಗೆ ಪೂರೈಕೆಯಾಗಿರುವ ಮೊಟ್ಟೆಗಳ ಪೈಕಿ ಬಹುತೇಕ ಮೊಟ್ಟೆಗಳು ಹಾಳಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಬಗ್ಗೆ ಸೂಕ್ತ ತನಿಖೆಗೆ ತಂಡ ರಚಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆಯಾಗುತ್ತಿರುವ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದು ತನಿಖಾ ವರದಿ ಸಲ್ಲಿಕೆಯಾದ ಬಳಿಕ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲೂ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಬಗ್ಗೆ ಸಿಡಿಪಿಓ ಶ್ರೀಲತಾ ರವರು ಪ್ರತಿಕ್ರಿಯೆ ನೀಡಿದ್ದು ಈ ಹಿಂದೆ ಅಂಗನವಾಡಿಗಳಿಗೆ ಸ್ಥಳೀಯವಾಗಿಯೇ ಮೊಟ್ಟೆ ಖರೀದಿಸುತ್ತಿದ್ದುದರಿಂದ ಸಮಸ್ಯೆ ಇರಲಿಲ್ಲ, ಟೆಂಡರ್ ಪ್ರಕ್ರಿಯೆ ಶುರುವಾದ ಬಳಿಕ ಈ ಸಮಸ್ಯೆ ಉದ್ಭವವಾಗಿದೆ, ಇದಕ್ಕೆ ಹಲವು ಕಾರಣಗಳೂ ಇರಬಹುದು ಎಂದು ಅವರು ತಿಳಿಸಿದ್ದಾರೆ.