ಲ್ಯಾಪ್‌ಟಾಪ್, ಟ್ಯಾಬ್ಲೆಟ್‌, ಪರ್ಸನಲ್ ಕಂಪ್ಯೂಟರ್‌ಗಳ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ

Share with

ನವದೆಹಲಿ: ಲ್ಯಾಪ್‌ ಟಾಪ್, ಟ್ಯಾಬ್ಲೆಟ್‌ ಹಾಗೂ ಪರ್ಸನಲ್ ಕಂಪ್ಯೂಟರ್‌ ಗಳ ಆಮದಿಗೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ವಿದೇಶ ವ್ಯವಹಾರಗಳ ಮಹಾನಿರ್ದೇಶಕರ ಪ್ರಕಟಣೆ ತಿಳಿಸಿದೆ.

‘ಸಕಾರಣವಿರುವ ಪರವಾನಗಿ ಇದ್ದರೆ ಮಾತ್ರ ‘HSN 8741‘ ಅಡಿಯಲ್ಲಿ ಬರುವ ಲ್ಯಾಪ್‌ ಟಾಪ್‌, ಟ್ಯಾಬ್ಲೆಟ್‌, ಆಲ್‌ ಇನ್ ಒನ್ ಪರ್ಸನಲ್ ಕಂಪ್ಯೂಟರ್‌, ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‌’ಗಳ ಆಮದು ಮಾಡಿಕೊಳ್ಳಲು ಮಾತ್ರ ಅನುಮತಿ ಇದೆ’ ಎಂದು ಹೇಳಲಾಗಿದೆ.

‘ಸಂಶೋಧನೆ ಮತ್ತು ಅಭಿವೃದ್ಧಿಗೆ ಅಗತ್ಯವಿದ್ದಲ್ಲಿ ಇಂಥ 20 ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅನುಮತಿ ಇದೆ. ಆದರೆ ಈ ಕಾರಣ ನೀಡಿ ಆಮದು ಮಾಡಿಕೊಂಡ ನಿರ್ಬಂಧಿತ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಅವುಗಳನ್ನು ಮಾರಾಟ ಮಾಡುವಂತಿಲ್ಲ. ತಮ್ಮ ಉದ್ದೇಶ ಪೂರ್ಣಗೊಂಡ ನಂತರ ಅವುಗಳನ್ನು ನಾಶಪಡಿಸಬೇಕು, ಇಲ್ಲವೇ ಮರು ರಫ್ತು ಮಾಡಬೇಕು’ ಎಂದು ಷರತ್ತು ವಿಧಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ, ‘ಬ್ಯಾಗೇಜ್‌ ಕಾನೂನು ಅಡಿಯಲ್ಲಿ ಈ ರೀತಿಯ ಕಂಪ್ಯೂಟರ್‌ ವಸ್ತುಗಳ ಆಮದಿಗೆ ಯಾವುದೇ ನಿರ್ಬಂಧವಿಲ್ಲ. ಇವುಗಳಲ್ಲಿ ಯಾವುದೇ ಬದಲಾವಣೆ ಇದ್ದರೂ ಕಾಲಕಾಲಕ್ಕೆ ಹೊರಡಿಸಲಾಗುವ ಪ್ರಕಟಣೆ ಮೂಲಕ ತಿಳಿಸಲಾಗುವುದು’ ಎಂದು ಸ್ಪಷ್ಟಪಡಿಸಲಾಗಿದೆ


Share with

Leave a Reply

Your email address will not be published. Required fields are marked *