ಬಂಟ್ವಾಳ: ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಪೊಲೀಸ್ ಸಿಬ್ಬಂದಿಯ ಎರಡು ಮೊಬೈಲ್ ಫೋನ್ ಕಳವಾದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ಸಂಚಾರಿ ಠಾಣೆ ಸಿಬ್ಬಂದಿಯೊಬ್ಬರು ಅನಾರೋಗ್ಯದ ಕಾರಣದಿಂದ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ.19ರಂದು ಜನರಲ್ ವಾರ್ಡ್ ನಲ್ಲಿ ಮಲಗಿದ್ದ ವೇಳೆ ಇವರು ಮಲಗಿರುವ ಮಂಚದ ಪಕ್ಕದ ಟೇಬಲ್ ಮೇಲೆ ಇರಿಸಿದ್ದ ಎರಡು ಮೊಬೈಲ್ ಫೋನ್ ಗಳನ್ನು ಕಳವು ಮಾಡಲಾಗಿದೆ.
ಮೊಬೈಲ್ ಕಳ್ಳತನ ಮಾಡಿದ ಮತ್ತು ಯುವಕನೋರ್ವ ಆಸ್ಪತ್ರೆಗೆ ಬಂದು ಹೋಗುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೇ ಯುವಕ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರಲ್ಲಿ “ಒಮ್ಮೆ ಫೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಫೋನ್ ಮಾಡಲು ಇದೆ” ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋದವನು ಮೊಬೈಲ್ ಜೊತೆ ನಾಪತ್ತೆಯಾಗಿದ್ದ. ಅದೇ ಯುವಕ ಮತ್ತೆ ಪೊಲೀಸ್ ಸಿಬ್ಬಂದಿಯ ಫೋನ್ ಕಳ್ಳತನ ಮಾಡಿದ್ದು ಸಿ.ಸಿ ಕ್ಯಾಮರಾದ ಮೂಲಕ ತಿಳಿದು ಬಂದಿದೆ.