ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣದ ವಿಚಾರಣೆಗೆ ನಗರಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ (National Commission for Women) ಸದಸ್ಯೆ ಖುಷ್ಬೂ ಸುಂದರ್ ಭೇಟಿ ನೀಡಿದ್ದರು. ಈ ವೇಳೆ ಜು.27 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿದರು. ಕಾಲೇಜಿನ ಶೌಚಾಲಯದಲ್ಲಿ ಯಾವ ಹಿಡನ್ ಕ್ಯಾಮರಾ ಇರಲಿಲ್ಲ ಎಂದು ಅವರು ಹೇಳಿದರು.
ನಮ್ಮ ವಿಚಾರಣೆ ಇನ್ನೂ ಮುಗಿದಿಲ್ಲ, ಇದು ಆರಂಭ ಮಾತ್ರವಾಗಿದೆ. ಈ ಹಂತದಲ್ಲಿ ಹೆಚ್ಚಿನ ವಿವರ ಬಹಿರಂಗಪಡಿಸುವುದಿಲ್ಲ. ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಖುಷ್ಬೂ ತಿಳಿಸಿದ್ದಾರೆ.
ಎಷ್ಟು ದಿನ ಉಡುಪಿಯಲ್ಲೇ ಇರುತ್ತೇನೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಕಾಲೇಜು ಆಡಳಿತ ಮಂಡಳಿಯಿಂದ ಎಲ್ಲಾ ಮಾಹಿತಿ ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಅವರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಮತ್ತು ಇತರ ಪೊಲೀಸರಿಂದ ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿದ್ದರು.