ಶೈಲಪುತ್ರಿ ಯಾರು? ಹಿನ್ನಲೆ ಏನು? ಪೂಜೆಯ ಮಹತ್ವವೇನು?
ಇಂದಿನಿಂದ ನವರಾತ್ರಿ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಅಕ್ಟೋಬರ್ 3ರಿಂದ ಅಕ್ಟೋಬರ್ 11ರವರೆಗೆ ಅಂದರೆ ಒಟ್ಟು 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ರೂಪದಲ್ಲಿ ದುರ್ಗಾದೇವಿಯನ್ನು ಪೂಜೆ ಮಾಡುವುದೇ ನವರಾತ್ರಿ ಹಬ್ಬದ ವಿಶೇಷ. ಅಕ್ಟೋಬರ್ 12ರಂದು ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.

ಕೆಟ್ಟದರ ಕಡೆಯಿಂದ ಒಳ್ಳೆಯದರ ಕಡೆಗೆ ಸಾಗುವ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಒಂಬತ್ತು ದಿನ ಶಕ್ತಿದೇವತೆ ಒಂಬತ್ತು ಅವತಾರಗಳಲ್ಲಿ ಮಹಿಷಾಸುರನೆಂಬ ರಾಕ್ಷಸನೊಂದಿಗೆ ಹೋರಾಡುತ್ತಾಳೆ. ಒಂಬತ್ತನೇ ದಿನ ಮಹಿಷಾಸುರನನ್ನು ಆಕೆ ಸಂಹರಿಸುತ್ತಾಳೆ. ಆ ನಂತರದ ದಿನವನ್ನು ಅಂದರೆ ಹತ್ತನೇ ದಿನ ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ಶೈಲಪುತ್ರಿ ದೇವಿಯ ಆಚರಣೆ:
ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿಯನ್ನು ಪೂಜಿಸುವ ಮೂಲಕ ಭಕ್ತರು ಉಪವಾಸವನ್ನು ಆರಂಭಿಸುತ್ತಾರೆ.

ಶೈಲಪುತ್ರಿ ಯಾರು?
ಪ್ರಜಾಪ್ರತಿ ಬ್ರಹ್ಮನ ಮಗ ದಕ್ಷನಿಗೆ 27ಜನ ಹೆಣ್ಣುಮಕ್ಕಳು. ಈ ಹೆಣ್ಣುಮಕ್ಕಳನ್ನು ದಕ್ಷ ಚಂದ್ರನಿಗೆ ಕೊಟ್ಟು ಮದುವೆ ಮಾಡಿಸಿದ್ದನು. ಇವರಲ್ಲಿ ಒಬ್ಬ ಮಗಳು ದಾಕ್ಷಾಯಿಣಿ ಸ್ಮಶಾನವಾಸಿ ಶಿವನನ್ನು ವರಿಸುತ್ತಾಳೆ. ಆದರೆ ಶಿವನನ್ನು ಕಂಡರೆ ದಕ್ಷನಿಗೆ ಮಹಾಕೋಪ. ಯಾಕೆಂದರೆ ತನ್ನ ಸೌಂದರ್ಯವತಿ ಮಗಳು ಸ್ಮಶಾನವಾಸಿಯನ್ನು ಮದುವೆಯಾಗಿದ್ದನ್ನು ಸಹಿಸಿಕೊಳ್ಳುವುದು ಕಷ್ಟವಾಗಿತ್ತು.
ಹೀಗೊಮ್ಮೆ ದಕ್ಷ ಮಹಾ ಯಜ್ಞವೊಂದನ್ನು ಆಯೋಜಿಸಿ ಸಕಲರನ್ನೂ ಆಹ್ವಾನಿಸಿದ್ದನು. ಈ ಯಜ್ಞಕ್ಕೆ ದಕ್ಷ ಆಗಮಿಸಿದಾಗ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರು ಗೌರವಾರ್ಥವಾಗಿ ಎದ್ದು ನಿಂತರು. ಶಿವ ಏಳದೇ ಇದ್ದದ್ದು ದಕ್ಷನ ಕೋಪವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ಇದರ ಪ್ರತೀಕವಾಗಿ ದಕ್ಷ ಇನ್ನೊಂದು ಯಜ್ಞ ಮಾಡಿ ಶಿವ ಮತ್ತು ತನ್ನ ಮಗಳು ದಾಕ್ಷಾಯಿಣಿ ಇಬ್ಬರನ್ನೂ ಆಹ್ವಾನಿಸಲಿಲ್ಲ.
ಆದರೆ ದಾಕ್ಷಾಯಿಣಿ ಮನಸ್ಸು ಯಜ್ಞೆಗೆ ಹೋಗದಿರಲು ಒಪ್ಪಲಿಲ್ಲ. ತಂದೆ ಕರೆಯದೇ ಇದ್ದರೂ ಶಿವನ ಮನವೊಲಿಸಿ ಕರೆದುಕೊಂಡು ಹೋಗುತ್ತಾಳೆ. ಆಗ ದಕ್ಷ ದಾಕ್ಷಾಯಿಣಿ ಮಾತ್ರವಲ್ಲದೆ ಆಕೆಯ ಪತಿ ಶಿವನನ್ನು ಅವಮಾನಿಸುತ್ತಾನೆ. ಹೀಗಾಗಿ ಮನನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.
ಈಕೆ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿ ಶೈಲಪುತ್ರಿಯಾಗಿ ಜನಿಸುತ್ತಾಳೆ. ಹೀಗಾಗಿ ದಸರಾ ಹಬ್ಬದ ಸಮಯದಲ್ಲಿ ಮನೆ ಹೆಣ್ಣುಮಕ್ಕಳನ್ನು ಗಂಡನ ಮನೆಯಿಂದ ಆಹ್ವಾನಿಸಿ ಗೌರವಿಸುವ ಸಂಪ್ರದಾಯವಿದೆ.
ಶೈಲಪುತ್ರಿ ಹೇಗಿರುತ್ತಾಳೆ?
ಶೈಲಪುತ್ರಿ ಪರ್ವತರಾಜ ಹಿಮವಂತನ ಮಗಳು. ಈಕೆಯೇ ಪಾರ್ವತಿ ಎನ್ನಲಾಗುತ್ತದೆ. ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು ಈಕೆ. ಶೈಲಪುತ್ರಿ ಒಂದು ಕೈಯಲ್ಲಿ ಕಮಲ ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುತ್ತಾಳೆ. ಗೂಳಿ ಈಕೆಯ ವಾಹನವಾಗಿದೆ. ಹೀಗಾಗಿ ಗೂಳಿಯನ್ನು ವೃಷರುಧ ಎಂದು ಕರೆಯಲಾಗುತ್ತದೆ. ಅಲ್ಲದೆ ಮನೋಕಾರಕನಾದ ಚಂದ್ರ ಮತ್ತು ತಮೋಗುಣದ ಸಂಕೇತವಾದ ತ್ರಿಶೂಲ ಈಕೆಯ ಬಳಿ ಇದೆ. ಇಂದ್ರ ಸೇರಿದಂತೆ ದೇವಾನುದೇವತೆಗಳ ಈರ್ಷ್ಯೆ ಮನೋಭಾವನೆಯನ್ನು ಶೈಲಪುತ್ರಿ ನಿಯಂತ್ರಿಸುತ್ತಾಳೆ ಎಂದು ಉಪನಿಷತ್ತುಗಳು ಹೇಳುತ್ತವೆ.
ಪೂಜಾ ವಿಧಾನ:
ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು. ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ, ಪೂಜಾ ಸ್ಥಳವನ್ನು ಸ್ವಚ್ಚಗೊಳಿಸಿ. ಪೂಜೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಶೈಲಪುತ್ರಿ ದೀಪದಾರತಿ, ಊದುಬತ್ತಿಯಿಂದ ಪೂಜಿಸಬೇಕು. ಹೂ, ಹಣ್ಣು, ಫಲ ಮತ್ತು ಸಿಹಿ ತಿನಿಸು ಸಮರ್ಪಿಸಬೇಕು. ಶುದ್ಧ ತುಪ್ಪದಿಂದ ಮಾಡಿದ ಪ್ರಸಾದವನ್ನು ನೈವೇದ್ಯವಾಗಿ ಇಡಬೇಕು.
ಶೈಲಪುತ್ರಿ ಮೂಲಾಧಾರ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಈ ದೇವಿ ಮಲ್ಲಿಗೆ ಹೂವನ್ನು ತುಂಬಾ ಇಷ್ಟಪಡುತ್ತಾಳೆ. ಈ ದಿನ ಸರಳವಾದ ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆ ಧರಿಸಿ, ಉಪವಾಸವನ್ನು ಆಚರಿಸಿ.
ಮಂತ್ರ
ಓಂಕಾರಹ: ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ (ಒಂದು ಬಾರಿ)
ಹಿಮಾಕರಹ: ಪಟು ಲಾಲೆಟ್ ಬಿಜರೂಪ ಮಹೇಶ್ವರಿ (ಎರಡು ಬಾರಿ)
ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರಿ (ಒಂದು ಬಾರಿ)
ಹಂಕಾರ ಪಟು ಹೈದಯಯಂ ತಾರಿಣಿ ಶಕ್ತಿ ಸ್ವಾಘ್ರಿತಾ (ಎರಡು ಬಾರಿ)ಘಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಾಪ್ರದಾ (ಎರಡು ಬಾರಿ)
ಘಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಾಪ್ರದಾ (ಎರಡು ಬಾರಿ)
ಮಹತ್ವ
ಶೈಲಪುತ್ರಿಯ ಆರಾಧನೆಯಿಂದ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವ ಶಕ್ತಿ ದೊರೆಯುತ್ತದೆ. ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಅಡೆತಡೆಗಳಿಗೆ ಪರಿಹಾರ ಸಿಗಲಿದೆ. ಭಕ್ತರು ಈ ದಿನ ಶ್ರದ್ಧಾ ಭಕ್ತಿಯಿಂದ ಶೈಲಪುತ್ರಿಯನ್ನು ಪೂಜಿಸಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿದೆ. ಅಲ್ಲದೆ ಶೈಲಪುತ್ರಿಯ ಆಶೀರ್ವಾದ ಲಭಿಸಲಿದೆ.