ಮಂಜೇಶ್ವರ: ಮಜೀರ್ಪಳ್ಳ ಸಮೀಪದ ಮೀಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಚಿನ್ನಾಭರ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ದೋಚಿದ ಘಟನೆ ಜು. 26ರಂದು ರಾತ್ರಿ ನಡೆದಿದೆ.


ಗರ್ಭಗುಡಿಯ ಬೀಗ ಮುರಿಯಲಾಗಿದ್ದು, ಅದರೊಳಗಿದ್ದ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ನಡೆಸಲಾಗಿದೆ. ಕ್ಷೇತ್ರದ ಇನ್ನೊಂದು ಕೊಠಡಿಯಲ್ಲಿದ್ದ ಲಾಕರನ್ನು ಮುರಿಯಲೆತ್ನಿಸಿದ್ದು, ಆದರೆ ಅದು ಸಾದ್ಯವಾಗಲಿಲ್ಲ. ಇದೇ ವೇಳೆ ಪರಿಸರದಲ್ಲಿ ಪೆಟ್ಟಿಗೆಯಲ್ಲಿರಿಸಿದ ಭಕ್ತರು ಹರಕೆ ರೂಪದಲ್ಲಿ ನೀಡಿದ್ದ ಸುಮಾರು 10ಪವನ್ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಶನಿವಾರ ಬೆಳಿಗ್ಗೆ ಸಿಬ್ಬಂದಿಗಳು ತಲುಪಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಹಿಂಬದಿಯ ಆವರಣಗೋಡೆ ಹಾರಿ ಸುತ್ತು ಗೋಪುರದ ಮಾಡಿನ ಮೇಲೆಯಿಂದ ಒಳ ನುಗ್ಗಿ ಕಳವು ನಡೆಸಿ ಪರಾರಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿನ ಸಿಸಿ ಕ್ಯಾಮರಾದಲ್ಲಿ ರಾತ್ರಿ ಸುಮಾರು 11ಗಂಟೆಯ ವೇಳೆ ಓರ್ವ ಕಳ್ಳನ ದೃಶ್ಯ ಪತ್ತೆಯಾಗಿದೆ. ಸ್ಥಳಕ್ಕೆ ಮಂಜೇಶ್ವರ ಪೋಲೀಸರು ತಲುಪಿ ತನಿಖೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಕಳವು ನಡೆದ ಬಗ್ಗೆ ತಿಳಿದು ಭಾರೀ ಸಂಖ್ಯೆಯಲ್ಲಿ ಭಕ್ತರು ತಲುಪಿದ್ದಾರೆ.




