ಮುಂಬಯಿ: ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ‘ರಾಮಾಯಣ’ (Ramayana Movie) ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕ ಹಾಗೂ ಸಮಯವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜುಲೈ 24ರಂದೇ ಟ್ರೇಲರ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದರಿಂದ ನಿರಾಶರಾಗಿದ್ದ ಅಭಿಮಾನಿಗಳಿಗೆ ಇದೀಗ ನಿರ್ಮಾಪಕರು ಸಿಹಿ ಸುದ್ದಿ ನೀಡಿದ್ದು, ಗುರುವಾರದಂದು (ಜು.30) ಟ್ರೇಲರ್ ಜಾಗತಿಕವಾಗಿ ಅನಾವರಣಗೊಳ್ಳಲಿದೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ, “ಶುಭಬ್ರಹ್ಮ ಮುಹೂರ್ತದ ವೇಳೆಯಲ್ಲಿ, ಜುಲೈ 30ರ ಗುರುವಾರ ಮುಂಜಾನೆ 4:15ಕ್ಕೆ (ಭಾರತೀಯ ಕಾಲಮಾನ) ನಮ್ಮ ರಾಮಾಯಣ ಚಿತ್ರದ ಟ್ರೇಲರ್ ಅನಾವರಣಗೊಳಿಸುವ ಮೂಲಕ ಹೊಸ ಭರವಸೆಯ ಮುಂಜಾವನ್ನು ಸ್ವಾಗತಿಸುತ್ತಿದ್ದೇವೆ,” ಎಂದು ತಿಳಿಸಿದೆ.
ಆದರೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ‘ರಾಮಾಯಣ’ ಟ್ರೇಲರ್ ಸೋರಿಕೆಯಾಗಿದ್ದು, ಅಧಿಕೃತವಾಗಿ ರಿಲೀಸ್ ಆಗುವ ಮುನ್ನವೇ ಅನೇಕರು ಟ್ರೇಲರ್ ವೀಕ್ಷಿಸಿ ಫಿದಾ ಆಗಿದ್ದಾರೆ.
ಟ್ರೇಲರ್ ಬಿಡುಗಡೆ ಮುಂದೂಡಿಕೆಗೆ ಕಾರಣವೇನು?
ಜುಲೈ 24ರಂದು ನಿರ್ಮಾಪಕ ನಮಿತ್ ಮಲ್ಲೋತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, “ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ (Sony Pictures Entertainment) ಜೊತೆಗಿನ ಸಹಭಾಗಿತ್ವದೊಂದಿಗೆ ರಾಮಾಯಣವನ್ನು ಜಗತ್ತಿಗೆ ತಲುಪಿಸುವ ನನ್ನ ಕನಸು ನನಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರೇಲರ್ ಬಿಡುಗಡೆಯನ್ನು ಜಾಗತಿಕ ಮಟ್ಟದಲ್ಲಿ ಹೊಸ ದಿನಾಂಕಕ್ಕೆ ಮುಂದೂಡಲಾಗುತ್ತಿದೆ,” ಎಂದು ಸ್ಪಷ್ಟನೆ ನೀಡಿದ್ದರು.
ಮುಂದುವರಿದು ಮಾತನಾಡಿದ್ದ ಅವರು, “100ಕ್ಕೂ ಹೆಚ್ಚು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ, ಯಾವುದೇ ಪ್ರಮುಖ ಜಾಗತಿಕ ಹಾಲಿವುಡ್ ಸಿನಿಮಾದಂತೆ ‘ರಾಮಾಯಣ’ವನ್ನು ಇಡೀ ಜಗತ್ತಿಗೆ ತಲುಪಿಸುತ್ತಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಸಂಸ್ಕೃತಿ ಮತ್ತು ಕಥೆಗಳ ಶ್ರೀಮಂತಿಕೆಯನ್ನು ಜಗತ್ತು ಪುನಃ ನವ ಚೈತನ್ಯದೊಂದಿಗೆ ಅನ್ವೇಷಿಸಲು ಇದು ದಾರಿ ಮಾಡಿಕೊಡಲಿದೆ,” ಎಂದು ಹೇಳಿದ್ದರು.
‘ರಾಮಾಯಣ’ ಚಿತ್ರವನ್ನು ಬರೋಬ್ಬರಿ ₹4,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ನಮಿತ್ ಮಲ್ಲೋತ್ರಾ, “ನಾವು ಆರೇಳು ವರ್ಷಗಳ ಹಿಂದೆ ಈ ಸಿನಿಮಾ ಮಾಡಲು ಹೊರಟಾಗ, ಜನ ನನ್ನನ್ನು ಹುಚ್ಚ ಅಂದುಕೊಂಡಿದ್ದರು. ಏಕೆಂದರೆ ಈ ಮಟ್ಟದ ಬಜೆಟ್‌ನಲ್ಲಿ ಯಾವುದೇ ಭಾರತೀಯ ಚಿತ್ರ ನಿರ್ಮಾಣವಾಗಿರಲಿಲ್ಲ. ಸರಳವಾಗಿ ಹೇಳಬೇಕೆಂದರೆ, ಎರಡೂ ಭಾಗಗಳನ್ನು ಸೇರಿಸಿ ಸುಮಾರು $500 ಮಿಲಿಯನ್ (₹4,000 ಕೋಟಿಗೂ ಹೆಚ್ಚು) ವೆಚ್ಚವಾಗಲಿದೆ. ಜಾಗತಿಕ ಮಟ್ಟದಲ್ಲಿ ಪ್ರದರ್ಶನಗೊಳ್ಳಲು ಅರ್ಹವಾಗಿರುವ ಈ ಮಹಾಕಾವ್ಯಕ್ಕಾಗಿ ನಾವು ವಿಶ್ವದ ಅತಿ ದೊಡ್ಡ ಚಿತ್ರವನ್ನು ನಿರ್ಮಿಸುತ್ತಿದ್ದೇವೆ,” ಎಂದಿದ್ದರು.
ನಿರ್ದೇಶಕ ನಿತೀಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯದಲ್ಲಿ ಶ್ರೀರಾಮನಾಗಿ ರಣ್ಣೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಾಯಿಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಿದ್ದಾರೆ.
ಇನ್ನುಳಿದಂತೆ ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಅವರು ಕಾಣಿಸಿಕೊಳ್ಳಲಿದ್ದಾರೆ.
ಎರಡು ಭಾಗಗಳಲ್ಲಿ ‘ರಾಮಾಯಣ’ ತೆರೆಗೆ ಬರಲಿದೆ. ಮೊದಲ ಭಾಗವು 2026ರ ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಪ್ರೇಕ್ಷಕರ ಮುಂದೆ ಬರಲಿದೆ.




