Indian military: ಭಾರತದ ಮಿಲಿಟರಿ ಉತ್ಪಾದನೆ ಮತ್ತು ರಫ್ತು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ

Share with

ನವದೆಹಲಿ, ಮೇ 30: ಭಾರತದ ವಾರ್ಷಿಕ ಮಿಲಿಟರಿ ಉತ್ಪಾದನೆ 2024-25ರಲ್ಲಿ 1.46 ಲಕ್ಷ ಕೋಟಿ ರೂ ಮುಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ (2023-24) ಇದು 1.27 ಲಕ್ಷ ಕೋಟಿ ರೂ ಇತ್ತು. ಉತ್ಪಾದನೆ ಪ್ರಮಾಣ ಶೇ. 15ರಷ್ಟು ಹೆಚ್ಚಾಗಿದೆ. ಡಿಫೆನ್ಸ್ ಉತ್ಪಾದನೆಯಲ್ಲಿ (Defence production) 1.46 ಲಕ್ಷ ಕೋಟಿ ರೂ ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ಧಾರೆ. ಹಾಗೆಯೇ, ರಕ್ಷಣಾ ಕ್ಷೇತ್ರದ ರಫ್ತು ಕೂಡ ಹೊಸ ದಾಖಲೆ ಬರೆದಿದೆ.

2023-24ರಲ್ಲಿ ಭಾರತದ ಮಿಲಿಟರಿ ರಫ್ತು 21,082 ಕೋಟಿ ರೂ ಇತ್ತು. ಅದು 2024-25ರಲ್ಲಿ 24,000 ಕೋಟಿ ರೂಗೆ ಏರಿದೆ. ಸಿಐಐ ವಾರ್ಷಿಕ ಬ್ಯುಸಿನೆಸ್ ಸಮಿಟ್ನಲ್ಲಿ ಮಾತನಾಡುತ್ತಾ, ರಾಜನಾಥ್ ಸಿಂಗ್ ಈ ಮಾಹಿತಿಯನ್ನು ಹೊರಗೆಡವಿದ್ದಾರೆ.

ಖಾಸಗಿ ವಲಯದ ಕೊಡುಗೆ ಗಣನೀಯ ಏರಿಕೆ
ಸರ್ಕಾರಿ ಸಂಸ್ಥೆಗಳಿಗೆ ಬಹುತೇಕ ಸೀಮಿತವಾಗಿದ್ದ ಡಿಫೆನ್ಸ್ ಉತ್ಪಾದನಾ ಕ್ಷೇತ್ರ ಇತ್ತೀಚೆಗೆ ಖಾಸಗಿ ವಲಯಕ್ಕೆ ಮುಕ್ತವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಿಂದ ಮಿಲಿಟರಿ ಉತ್ಪಾದನೆ ಹೆಚ್ಚಾಗುತ್ತಿದೆ. 2024-25ರಲ್ಲಿ ಖಾಸಗಿ ಸಂಸ್ಥೆಗಳಿಂದ 32,000 ಕೋಟಿ ರೂನಷ್ಟು ಡಿಫೆನ್ಸ್ ಪ್ರೊಡಕ್ಷನ್ ನಡೆದಿದೆ. ಇದು ಒಟ್ಟಾರೆ ಈ ಕ್ಷೇತ್ರದ ಉತ್ಪಾದನೆಯ ಶೇ.. 22ರಷ್ಟು ಎಂದು ಹೇಳಲಾಗುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಡಿಫೆನ್ಸ್ ಪ್ರೊಡಕ್ಷನ್ನಲ್ಲಿ ಖಾಸಗಿ ಪಾಲು ಶೇ 20.8ರಷ್ಟಿತ್ತು.

ಐದು ಎಎಂಸಿಎ ಪ್ರೋಟೋಟೈಪ್ ತಯಾರಿಕೆಯಲ್ಲಿ ಖಾಸಗಿಯವರೂ ಭಾಗಿ
ಕೇಂದ್ರ ಸರ್ಕಾರವು ಐದನೆ ತಲೆಮಾರಿನ ಫೈಟರ್ ಜೆಟ್ಗಳನ್ನು ಸ್ವಂತವಾಗಿ ತಯಾರಿಸುವ ಎಎಂಸಿಎ ಪ್ರಾಜೆಕ್ಟ್ ಅನ್ನು ಕಾರ್ಯಗತಗೊಳಿಸುವ ಯೋಜನೆಗೆ ಹಸಿರು ನಿಶಾನೆ ನೀಡಿದೆ. ಇದರಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಇದರಡಿಯಲ್ಲಿ ಐದು ಫೈಟರ್ ಜೆಟ್ಗಳ ಪ್ರೋಟೋಟೈಪ್ಗಳನ್ನು ಅಭಿವೃದ್ಧಿಪಡಿಸಲಾಗಲಿದೆ. ಬಳಿಕ ಅವುಗಳ ತಯಾರಿಕೆ ಶುರುವಾಗುತ್ತದೆ ಎಂದು ಹೇಳಿದ್ದಾರೆ ರಾಜನಾಥ್ ಸಿಂಗ್.

ಭಾರತದಲ್ಲಿ ಸದ್ಯ ರಕ್ಷಣಾ ಕ್ಷೇತ್ರ ಉತ್ಪಾದನೆ ವರ್ಷಕ್ಕೆ 1.46 ಲಕ್ಷ ಕೋಟಿ ರೂ ಇದೆ. ಇದು 2047ಕ್ಕೆ 8.8 ಲಕ್ಷ ಕೋಟಿ ರೂಗೆ ಏರಿಕೆ ಆಗುವ ನಿರೀಕ್ಷೆ ಇದೆ. ಹಾಗೆಯೇ, ರಕ್ಷಣಾ ಕ್ಷೇತ್ರದ ಬಜೆಟ್ 2025-26ರಲ್ಲಿ 6.81 ಲಕ್ಷ ಕೋಟಿ ರೂ ಇದೆ. ಇದು 2047ಕ್ಕೆ ಐದು ಪಟ್ಟು ಹೆಚ್ಚಾಗಿ 31.7 ಲಕ್ಷ ಕೋಟಿ ರೂ ತಲುಪಬಹುದು ಎಂದು ಸಿಐಐ ಮತ್ತು ಕೆಪಿಎಂಜಿ ಇಂಡಿಯ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಅಂದಾಜು ಮಾಡಲಾಗಿದೆ.

ಸಿಐಐ ವಾರ್ಷಿಕ ಬ್ಯುಸಿನೆಸ್ ಸಮಿಟ್ನಲ್ಲಿ ‘ಆತ್ಮನಿರ್ಭರ್, ಅಗ್ರಣಿ ಮತ್ತು ಅತುಲ್ಯ ಭಾರತ್ 2047’ ಹೆಸರಿನ ಈ ವರದಿಯನ್ನು ಬಿಡುಗಡೆ ಮಾಡಲಾಯಿತು.


Share with

Leave a Reply

Your email address will not be published. Required fields are marked *