ಮಂಗಳೂರು: ಇದೇ ಮೊದಲ ಬಾರಿಗೆ ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ಶುಕ್ರವಾರ (ಸೆ.18) ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಮಂಗಳೂರಿನ ಪ್ರಜಾಸೌಧದಲ್ಲಿ ಸತತ ಮೂರು ಗಂಟೆಗಳ ಕಾಲ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತುಳುವಿಗೆ 2ನೇ ಹೆಚ್ಚುವರಿ ಭಾಷೆಯಾಗಿ ಮಾನ್ಯತೆ
ಹಲವು ಸಮಯಗಳಿಂದ ಚರ್ಚೆಯ ವಿಷಯವಾಗಿದ್ದ ತುಳು ಭಾಷೆಗೆ ರಾಜ್ಯ ಭಾಷೆಯಾಗಿ ಮಾನ್ಯತೆ ನೀಡುವ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆಯನ್ನು ನೀಡುವ ಮೂಲಕ ಕನ್ನಡದೊಂದಿಗೆ ತುಳು ಭಾಷೆಯನ್ನು 2ನೇ ಹೆಚ್ಚುವರಿ ಅಧಿಕೃತ ಆಡಳಿತಾತ್ಮಕ ಭಾಷೆಯಾಗಿ ಘೋಷಿಸಿದ್ದಾರೆ.
ಭಾಷಾ ಬಳಕೆ ಹಾಗೂ ಅಭಿವೃದ್ಧಿಗೆ ಸಂಬಂಧಿತ ಚಟುವಟಿಕೆಗಳಿಗಾಗಿ ಪ್ರತಿ ವರ್ಷ 82 ಲಕ್ಷ ರೂ. ಅನುದಾನವನ್ನೂ ಘೋಷಿಸಲಾಗಿದೆ.
ಕರಾವಳಿ ಕರ್ನಾಟಕದ ಒಟ್ಟಾರೆ ಅಭಿವೃದ್ಧಿಗೆ 32,611 ಕೋಟಿ ರೂ ಮೀಸಲಿಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. 16,000 ಕೋಟಿ ರೂ ರಸ್ತೆ ಅಭಿವೃದ್ಧಿಗೆ ಮತ್ತು 16,000 ಕೋಟಿ ರೂ ಕರಾವಳಿ ಅಭಿವೃದ್ಧಿಗೆ ನಿಧಿ ನೀಡಲಾಗುವುದು ಎಂದರು.
ಮಂಗಳೂರು ಜಿಲ್ಲೆ ಹೆಸರಿಗೆ ಜನಾಭಿಪ್ರಾಯ ಸಂಗ್ರಹ
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಹೆಸರು ಬದಲಾವಣೆ ಮಾಡುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಹೇಳಿದರು. ಮಂಗಳೂರು ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ಹೀಗಾಗಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಒಂದು ತಿಂಗಳು ಕಾಲ ಜನರ ಅಭಿಪ್ರಾಯ ಪಡೆದು ಅದರ ಬಳಿಕ ನಿರ್ಧಾರ ಮಾಡುತ್ತೇವೆ ಎಂದರು.
ಉಳಿದಂತೆ ಮಲೆನಾಡು ಮತ್ತು ಕರಾವಳಿಗೆ ಪ್ರತ್ಯೇಕ ಟೂರಿಸಂ ಪಾಲಿಸಿ ಮಾಡುತ್ತೇವೆ. 500 ಕೋಟಿ ವೆಚ್ಚದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಮೀನುಗಾರಿಕೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಾಣದ ವಿಚಾರದ ಬಗ್ಗೆಯೂ ಸಿಎಂ ಮಾತನಾಡಿದರು.




