
ಹಾಸನ : ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪ ನಿರ್ದೇಶಕರು ಆಲೂಗಡ್ಡೆ ಬೆಳೆಯಲ್ಲಿ ರೈತರು ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮವನ್ನು ತಿಳಿಸಿದ್ದಾರೆ.

ಬಿತ್ತನೆಗಾಗಿ ಆಲೂಗಡ್ಡೆ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದ ನಂತರ, ನೆರಳಿನಲ್ಲಿ ಗಡ್ಡೆಗಳನ್ನು ಮಂದ ಬೆಳಕಿಗೆ ಗಾಳಿಯಾಡುವ ಕೊಠಡಿಯಲ್ಲಿ ಕನಿಷ್ಠ 10 ರಿಂದ 15 ದಿವಸಗಳ ಕಾಲ ತೆಳುವಾಗಿ ಹರಡಿ ಇಡಬೇಕು. ಬಿತ್ತನೆ ಗಡ್ಡೆಗಳಲ್ಲಿ ದಪ್ಪವಾದ ಕಣ್ಣುಗಳು ಚೆನ್ನಾಗಿ ಮೂಡಿದಾಗ ಮತ್ತು ಸ್ವಲ್ಪ ಸುಕ್ಕುಗಟ್ಟಿ ಮೃದುವಾದಾಗ ಮಾತ್ರ ಬಿತ್ತನೆಗೆ ಸೂಕ್ತವಾಗಿರುತ್ತದೆ.
ಪ್ರತಿ ಬಿತ್ತನೆ ಗೆಡ್ಡೆ 35 ರಿಂದ 40ಗ್ರಾಂ ತೂಕ ಇರಬೇಕು. ಗೆಡ್ಡೆಗಳ ಗಾತ್ರ ದೊಡ್ಡದಾಗಿದ್ದಲ್ಲಿ, ಉದ್ದವಾಗಿ ಕತ್ತರಿಸಬೇಕು ಮತ್ತು ಪ್ರತಿ ಹೋಳಿನಲ್ಲಿ ಕನಿಷ್ಠ 2 ರಿಂದ 3 ಕಣ್ಣು ಗಳು ಇರಬೇಕು. 3-4 ಬಾರಿ ಮಳೆ ಬಂದ ನಂತರ ಭೂಮಿ ಉಳುಮೆ ಮಾಡಿ, ಭೂಮಿಯ ಉಷ್ಣಾಂಶ ಕಡಿಮೆಯಾದ ನಂತರ ಬಿತ್ತನೆ ಮಾಡಬೇಕು.
ಬಿತ್ತನೆ ಮಾಡುವ ಒಂದು ದಿನ ಮೊದಲೇ ಗೆಡ್ಡೆಗಳನ್ನು ಕತ್ತರಿಸಿ ಪ್ರತಿ ಲೀಟರ್ ನೀರಿಗೆ ಮ್ಯಾಂಕೋಜೆಬ್ 4 ಗ್ರಾಂ + ಸ್ಪೆಪ್ಪೋಮೈಸಿನ್ ಸಲ್ವೇಟ್ 0.5 ಗ್ರಾಂ ಈ ಪ್ರಮಾಣದಲ್ಲಿ ಬೆರೆಸಿದ ದ್ರಾವಣದಲ್ಲಿ 10 ರಿಂದ 15 ನಿಮಿಷಗಳ ಕಾಲ ಉಪಚರಿಸಿ ನೆರಳಿನಲ್ಲಿ 24 ಗಂಟೆಗಳ ಕಾಲ ಒಣಗಿಸಿ, ಬಿತ್ತನೆ ಮಾಡುವುದು. ಒಂದು ಬಾರಿ ಉಪಯೋಗಿಸಿದ ದ್ರಾವಣವನ್ನು 2 ರಿಂದ 3 ಬಾರಿ ಬೀಜೋಪಚಾರಕ್ಕೆ ಉಪಯೋಗಿಸಬಹುದು. ನಂತರ ಹೊಸದಾಗಿ ದ್ರಾವಣವನ್ನು ಮೇಲಿನ ಪ್ರಮಾಣದಂತೆ ತಯಾರಿಸಿಕೊಳ್ಳಬೇಕು.
ಪ್ರತಿ ಟನ್ ಕೊಟ್ಟಿಗೆ ಗೊಬ್ಬರಕ್ಕೆ 10 ಕಿ.ಗ್ರಾಂ. ಟ್ರೈಕೋಡರ್ಮ ಜೈವಿಕ ಶೀಲಿಂದ್ರವನ್ನು ಬೆರಸಿ 15 ರಿಂದ 20 ದಿನಗಳ ಕಾಲ ನೆರಳಿನಡಿಯಲ್ಲಿ ತೇವಾಂಶದಲ್ಲಿರಿಸಿ ಬಿತ್ತನೆ ಮಾಡುವ ಒಂದು ವಾರದ ಮುಂಚೆ ಮಣ್ಣಿಗೆ ಸೇರಿಸುವುದು.
ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಬಿತ್ತನೆ ಮಾಡಿದ ಆಲೂಗಡ್ಡೆ ಸಾಲಿನಿಂದ ನಾಲ್ಕು ಅಂಗುಲ ದೂರದಲ್ಲಿ ಕೊಡುವುದು ಅಥವಾ ಗಡ್ಡೆಗಳ ಬಿತ್ತನೆಗೂ ಮುಂಚೆ ಸಾಲಿನಲ್ಲಿ ಹಾಕಿ ಮಣ್ಣಿನಲ್ಲಿ ಮಿಶ್ರಣ ಮಾಡಿ ನಂತರ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ.
ರಸಗೊಬ್ಬರಗಳಾದ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ 75:75:100 8.mo. (DAP 163 kg, Urea 99.2 kg. MOP 166.7 kg) ಪ್ರತಿ ಹೆಕ್ಟೇರ್ಗೆ ನೀಡುವುದು. ಇವುಗಳಲ್ಲಿ ಶೇ. 50ರಷ್ಟು ಸಾರಜನಕವನ್ನು ಹಾಗೂ ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಬಿತ್ತನೆಗೂ ಮುಂಚೆ ಮಣ್ಣಿನಲ್ಲಿ ಸೇರಿಸುವುದು. ಬಿತ್ತನೆ ಮಾಡಿದ 30-35 ದಿನಗಳ ನಂತರ ಗಿಡಗಳ ಬುಡಕ್ಕೆ ಮಣ್ಣು ಏರಿಸುವಾಗ ಉಳಿದ ಶೇ.50ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡುವುದು. (ಸೂಚನೆ: ಪೊಟ್ಯಾಷ್ ಗೊಬ್ಬರವನ್ನು ಸಲ್ಫೇಟ್ ಆಫ್ ಪೊಟ್ಯಾಷ್ ರೂಪದಲ್ಲಿ ಪೂರೈಸುವುದು. ಮಣ್ಣು ಪರೀಕ್ಷೆ ಆಧರಿಸಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಮತ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ತಜ್ಞರ ಸಲಹೆಯಂತೆ ಅನುಸರಿಸುವುದರಿಂದ ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದು.)
ಬಿತ್ತನೆ ಮಾಡಿದ 55-60 ದಿನಗಳು: ಡೈಮೆಥೋಮಾರ್ಫ್ 1ಗ್ರಾಂ + ಮ್ಯಾಂಕೋಜೆಬ್ 3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಅಥವಾ (ಮ್ಯಾಂಕೋಜೆಬ್ + ಫೆನಾಮಿಡೋನ್) 3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
ಬಿತ್ತನೆ ಮಾಡಿದ 65-70 ದಿನಗಳು: (ಫೆಮಾಕ್ಸಡೋನ್ + ಸೈಮೋಕ್ಸನಿಲ್) 1.0 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಅಥವಾ (ಅಮೆಟೋಕ್ಯಾಡಿನ್ 27% + ಡೈಮೆಥೋಮಾರ್ಫ್ 20.27%S.ಅ) 2.0 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.




