ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: 8 ಆರೋಪಿಗಳು NIA ಕಸ್ಟಡಿಗೆ

Share with

ಮಂಗಳೂರು: ಬಜಪೆ ಸಮೀಪದ ಕಿನ್ನಿಪದವು ಜಂಕ್ಷನ್ ಬಳಿ ಮೇ 1ರಂದು ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ 8 ಆರೋಪಿಗಳನ್ನು ನ್ಯಾಯಾಲಯವು ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಕಸ್ಟಡಿಗೆ ನೀಡಿದೆ.

ಪ್ರಕರಣದ ಬಗ್ಗೆ ಎನ್‌ಐಎ ಪ್ರತ್ಯೇಕವಾಗಿ ಎಫ್‌ಐಆ‌ರ್ ದಾಖಲಿಸಿದೆ. ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡುವಂತೆ ಎನ್‌ಐಎ ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಮನವಿಯನ್ನು ಪುರಸ್ಕರಿಸಿದ ಬೆಂಗಳೂರಿನ 50ನೇ ಸಿಸಿಎಚ್ ನ್ಯಾಯಾಲಯ ಜು. 1ರವರೆಗೆ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಸುಹಾಸ್‌ ಶೆಟ್ಟಿ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಪಿಕಪ್ ವಾಹನ ಢಿಕ್ಕಿ ಪಡಿಸಿ ಅನಂತರ ಮಾರಕಾಯುಧಗಳಿಂದ ದಾಳಿ ಮಾಡಿ ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಫಾಜಿಲ್‌ನ ಸಹೋದರ ಆದಿಲ್ ಎಂಬಾತ ಸುಹಾಸ್‌ ಶೆಟ್ಟಿ ಕೊಲೆಗೆ ಹಣ ಕೊಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ ಈ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಕೈವಾಡ, ವಿದೇಶಿ ಹಣಕಾಸಿನ ನೆರವು ಆರೋಪ ಕೇಳಿಬಂದಿತ್ತು. ಎನ್‌ಐಎ ತನಿಖೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಬಳಿಕ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಇದೀಗ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೂಲಕ ಎನ್‌ಐಎ ವಿಚಾರಣೆ ತೀವ್ರಗೊಳಿಸಿದೆ.


Share with

Leave a Reply

Your email address will not be published. Required fields are marked *