ಬೆಂಗಳೂರು, ಜುಲೈ 06: ಬೆಂಗಳೂರು (Bengaluru) ನಮ್ಮ ಮೆಟ್ರೋ ಟಿಕೆಟ್ ದರ (Namma Metro Ticket Price) ಏರಿಕೆ ಖಂಡಿಸಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿದರೇ, ಕೇಂದ್ರ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿತ್ತು. ಸರ್ಕಾರಗಳ ಆರೋಪ-ಪ್ರತ್ಯಾರೋಪದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದು, ದರ ಏರಿಕೆ ಮಾಡಿದ್ದು ಯಾರು? ಎಂಬ ಪ್ರಶ್ನೆ ಉದ್ಭವಾಗಿದೆ. ಈ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾನೂನು ಸಮರಕ್ಕೆ ಇಳಿದಿದ್ದು, ದರ ನಿಗದಿ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ದರ

ನಿಗದಿ ಸಮಿತಿ ವರದಿ ತಯಾರಿಸುವ ಮುನ್ನ ವಿದೇಶ ಪ್ರವಾಸ ಮಾಡಿತ್ತು. ಬಿಎಂಆರ್ಸಿಎಲ್ ಶೇ.130 ರಷ್ಟು ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಿಸಿತ್ತು. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿತ್ತು. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ, ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ (ಜು.07) ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.




