ಲಡಾಖ್ವರೆಗೆ ಸೈಕಲ್ ಯಾತ್ರೆ: ಉಡುಪಿ ಯುವಕನ ಸಾಧನೆ, ದಾರಿ ಮಧ್ಯೆ ಸಿಕ್ಳು ಚಾರ್ಲಿ!

Share with

ಉಡುಪಿ, ಅಕ್ಟೋಬರ್ 09: 23 ವರ್ಷದ ಯುವಕನೋರ್ವ (boy) ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ ಉಡುಪಿಯಿಂದ (Udupi) ಲಡಾಖ್ವರೆಗೆ 3300 ಕಿಮೀ ಯಾತ್ರೆಯನ್ನು ಪೂರೈಸಿ ಬಂದಿದ್ದಾರೆ. ಸತತ 11 ತಿಂಗಳು ಸೈಕಲ್ನಲ್ಲಿ ಪ್ರಯಾಣಿಸಿ ಸಾಧನೆ ಮಾಡಿ ಹುಟ್ಟೂರಿಗೆ ಮರಳಿದ್ದಾರೆ. ಇವರ ಜೊತೆ ನಾಯಿ ಕೂಡ ಈ ಯಾತ್ರೆ ಪೂರೈಸಿರುವುದು ಮತ್ತೊಂದು ಅಚ್ಚರಿಯ ಸಂಗತಿ ಎಂದೇ ಹೇಳಬಹುದು.

330 ದಿನಗಳ ಸೈಕಲ್ ಯಾತ್ರೆ
ಕುಂದಾಪುರ ತಾಲೂಕಿನ ಕಮಲಶಿಲೆ ಹಳ್ಳಿಹೊಳೆ ಸಮೀಪದ ಪಾರ್ವತಿ ಮತ್ತು ಶೇಷು ಬೋವಿ ದಂಪತಿ ಪುತ್ರ ದಿನೇಶ್ ಬೋವಿ ಈ ಅಪರೂಪದ ಸಾಧನೆ ಮಾಡಿರುವ 23 ವರ್ಷದ ಯುವಕ. 2024ರ ಅಕ್ಟೋಬರ್ 15 ರಂದು ಉಡುಪಿಯಿಂದ ಸೈಕಲ್ ಮೂಲಕ ಲಡಾಖ್ಗೆ ಪ್ರಯಾಣ ಬೆಳೆಸಿದ್ದ ದಿನೇಶ್, 2025 ರ ಸೆಪ್ಟೆಂಬರ್ 15 ರಂದು ಲಡಾಖ್ ತಲುಪುವುದರ ಜೊತೆ ಸತತ 330 ದಿನಗಳ ಸೈಕಲ್ ಯಾತ್ರೆಯನ್ನು ಸಂಪೂರ್ಣಗೊಳಿಸಿದರು.

ಇದನ್ನೂ ಓದಿ: Video: ಬೆಂಗಳೂರಿನ ಬಸ್ ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡಿದ ಮಹಿಳೆ, ವೈರಲ್ ಆಯ್ತು ದೃಶ್ಯ

ಸೈಕಲ್ ಮೂಲಕ ಅವರು 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಕರ್ನಾಟಕದಿಂದ ಆರಂಭಗೊಂಡು, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮು ಕಾಶ್ಮೀರ್ ತಲುಪಿದ್ದರು.

11 ತಿಂಗಳಿಗಿಂತ ಬೇಗ ತಲುಪಬಹುದಾಗಿದ್ದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿದ್ದು, ಅದಕ್ಕಾಗಿ 1 ತಿಂಗಳು ಮುಂಬೈನಲ್ಲಿ ವಿಶ್ರಾಂತಿ ಮಾಡಿದ್ದರು. 3 ತಿಂಗಳು ಗುಜರಾತಿನಲ್ಲಿ ತಂಗಿದ್ದರು. ಲಡಾಖ್ನ ಛಾಂಗ್ ಭಾರತದ ಗಡಿಗ್ರಾಮವಾಗಿದ್ದು, ಅದರ ಆಚೆ ಪಾಕಿಸ್ಥಾನ ಭೂಪ್ರದೇಶ ಕಾಣಿಸುತ್ತದೆ. 11 ತಿಂಗಳ ಸೈಕಲ್ ಪ್ರಯಾಣದಲ್ಲಿ ಆಹಾರಕ್ಕೆ ಹೆಚ್ಚು ಖರ್ಚಾಗಿದ್ದು, ಪ್ರಯಾಣದ ಸಂಪೂರ್ಣ ವೆಚ್ಚ ಸುಮಾರು 1.5 ಲಕ್ಷ ರೂ ನಷ್ಟು ಆಗಿತ್ತು. ಇವರು ಕಲಿತ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಅವರು ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಿದ್ದಾರೆ.

ದಾರಿ ಮಧ್ಯೆ ಜೊತೆಯಾದ ಚಾರ್ಲಿ
ಈ ಪ್ರಯಾಣದಲ್ಲಿ ಪ್ರಮುಖ ವಿಷಯ ಏನು ಗೊತ್ತಾ? ಸೈಕಲ್ ಯಾತ್ರೆಗೆ ದಾರಿ ಮಧ್ಯೆ ಜೊತೆಯಾದ ನಾಯಿ ಚಾರ್ಲಿ. ಹೌದು.. ದಿನೇಶ್ ಅವರು ಸೈಕಲ್ ಪ್ರಯಾಣದ ವೇಳೆ ಕರ್ನಾಟಕ-ಗೋವಾ ಗಡಿಭಾಗದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿ ಹೆಣ್ಣು ನಾಯಿ ಮರಿಯೊಂದು ಇವರಿಗೆ ಸಿಕ್ಕಿದ್ದು, ಅದಕ್ಕೆ ಆಹಾರ ನೀಡಿದ್ದರು. ಬಳಿಕ ಅದನ್ನು ಜೊತೆಯಲ್ಲಿ ಕರೆದುಕೊಂಡು ಲಡಾಕ್ಗೆ ಸೈಕಲಿನಲ್ಲಿಯೇ ಪ್ರಯಾಣ ಬೆಳೆಸಿದ್ದರು. ದಿನೇಶ್ ಜೊತೆ ನಾಯಿ ಕೂಡ 326 ದಿನಗಳ ಕಾಲ ಸಂಚಾರ ಮುಗಿಸಿದೆ. ಅಲ್ಲಿಂದ ಆ ನಾಯಿಯೊಂದಿಗೆ ಅವರು ಊರಿಗೆ ವಾಪಾಸಾಗಿದ್ದು, ಈಗ ಮನೆಗೆ ಕೊಂಡೊಯ್ದಿದ್ದಾರೆ.

ಪರಿಸರ ಉಳಿಸಿ ಜಾಗೃತಿ
ರಸ್ತೆಯಲ್ಲಿ ಸಿಕ್ಕವರಿಗೆ ಪರಿಸರ ಉಳಿಸಿ ಅನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು. ಈ ಹಿಂದೆ ಉಡುಪಿಯಿಂದ ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದು, ಅದಾದ ಬಳಿಕ ಉಡುಪಿಯಿಂದ ಕನ್ಯಾಕುಮಾರಿಗೆ 1.500 ಕಿ.ಮೀ. ದೂರವನ್ನು (21 ದಿನಗಳ ಕಾಲ) ಸೈಕಲ್ನಲ್ಲಿ ಕ್ರಮಿಸಿದ್ದರು.

ದಿನೇಶ್ ಹೇಳಿದ್ದಿಷ್ಟು
ಮನೆಯವರು, ಕಾಲೇಜಿನವರ ಸಹಕಾರದಿಂದ ಲಡಾಖ್ ಸೈಕಲ್ ಯಾತ್ರೆ ಸಾಧ್ಯವಾಯಿತು ಎಂದು ದಿನೇಶ್ ಹೇಳುತ್ತಾರೆ. ಈ ಸಾಹಸಮಯ ಪ್ರವಾಸ ಪೂರೈಸಿ ಬಂದ ದಿನೇಶ್ಗೆ ಕಾಲೇಜಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಗಿದೆ.


Share with

Leave a Reply

Your email address will not be published. Required fields are marked *