ಅಧಿಕಾರಗಳ ನಿರ್ಲಕ್ಷ್ಯ: ಬಡವರಿಗೆ ಸೇರಬೇಕಿದ್ದ ಲಕ್ಷಾಂತರ ಟನ್ ಆಹಾರ ಧಾನ್ಯ ಹಾಳು

Share with

ದಾವಣಗೆರೆ, ಅ.14: ದಾವಣಗೆರೆಯ ಎಪಿಎಂಸಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಗೋದಾಮಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ (Lokayukta Raid) ನಡೆಸಿದ್ದಾರೆ. ಈ ದಾಳಿಯಲ್ಲಿ, ಬಡವರಿಗೆ, ಎಸ್‌ಸಿ, ಎಸ್‌ಟಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸಾವಿರಾರು ಟನ್ ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಅಸಮರ್ಪಕವಾಗಿ ಸಂಗ್ರಹಣೆ ಮಾಡಲಾಗಿದೆ. ಹಾಗೂ ಇದನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅಕ್ಕಿ ಮತ್ತು ಗೋಧಿ ಧಾನ್ಯಗಳಲ್ಲಿ ಹುಳು ಬಂದು ಸಂಪೂರ್ಣವಾಗಿ ಹಾಳಾಗಿದೆ. ಇದಕ್ಕೆ ಆಹಾರ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಬಿ.ಎಸ್. ಅವರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರಿ ಅವರ ನೇತೃತ್ವದ ತಂಡವು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2500 ಟನ್ ಸಾಮರ್ಥ್ಯದ ಈ ಗೋದಾಮಿನಲ್ಲಿ ಧಾನ್ಯಗಳನ್ನು ಅಸ್ತವ್ಯಸ್ತವಾಗಿ ಹರಡಿತ್ತು. ಅವುಗಳಲ್ಲಿ ಹೆಚ್ಚಿನವು 2023ರ ಏಪ್ರಿಲ್‌ನಿಂದಲೇ ಸಂಗ್ರಹವಾಗಿದ್ದ ಆಹಾರ ಧಾನ್ಯಗಳಾಗಿವೆ. ಸುದೀರ್ಘ ಕಾಲದ ಸಂಗ್ರಹಣೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಅಕ್ಕಿ ಮತ್ತು ಗೋಧಿ ಧಾನ್ಯಗಳಲ್ಲಿ ಹುಳು ಹಿಡಿದು ಕೊಳೆತುಹೋಗಿವೆ. ಬಡವರ ಪಾಲಿನ ಆಹಾರ ಧಾನ್ಯಗಳು ಹುಳುಗಳಿಗೆ ಆಹಾರವಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಬಡವರ ಹೊಟ್ಟೆ ತುಂಬಿಸಬೇಕಾದ ಆಹಾರ ಧಾನ್ಯಗಳು ಗೋದಾಮಿನಲ್ಲೇ ಕೊಳೆತು ಹಾಳಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *