ಭೀಕರ ಅವಘಡ..! ಶಾಲಾ ಬಸ್ ಗೆ ಬೆಂಕಿ..!! ಪುಟ್ಟ ಮಕ್ಕಳು ಅದೃಷ್ಟವಶಾತ್ ಪಾರು

Share with

ಜೈಪುರ: ರಾಜಸ್ಥಾನದ ಝುಂಜುನು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಭೀಕರ ಅವಘಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಸುಮಾರು 10 ಪುಟ್ಟ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಪ್ಲೇ ಸ್ಕೂಲ್ ವ್ಯಾನ್‌ನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಮಕ್ಕಳು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಜಿಲ್ಲೆಯ ಕಾಂಚನಿಯಾ ಕಿ ಧನಿ ಎಂಬ ಪ್ರದೇಶದ ಹತ್ತಿರ ನಡೆದಿದೆ. ಕಾಪರ್ ಕಾಂಪ್ಲೆಕ್ಸ್ ಪ್ರದೇಶದಿಂದ ಸಿಂಘಾನಾ ಕಡೆಗೆ ಮಕ್ಕಳನ್ನು ಕರೆದುಕೊಂಡು ವ್ಯಾನ್ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಚಾಲನೆ ಮಾಡುವಾಗ ವಾಹನದಿಂದ ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಬರುತ್ತಿರುವುದನ್ನು ಚಾಲಕ ತಕ್ಷಣ ಗಮನಿಸಿದ್ದಾನೆ. ಸಮಯಪ್ರಜ್ಞೆ ಮೆರೆದ ಆತ ತಕ್ಷಣವೇ ವ್ಯಾನ್ ಅನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾನೆ. ಬೆಂಕಿ ಇಡೀ ವಾಹನಕ್ಕೆ ಆವರಿಸುವ ಮುನ್ನವೇ ಸಲೀಸಾಗಿ ಎಲ್ಲಾ ಮಕ್ಕಳನ್ನು ಒಂದೇ ಕ್ಷಣದಲ್ಲಿ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾನೆ.

ಮಕ್ಕಳನ್ನು ಕೆಳಗಿಳಿಸಿದ ಕೆಲವೇ ನಿಮಿಷಗಳಲ್ಲಿ ಇಡೀ ವ್ಯಾನ್ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಧಗಧಗನೆ ಹೊತ್ತಿ ಉರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಖೇತ್ರಿ ಮತ್ತು ಹತ್ತಿರದಲ್ಲೇ ಇದ್ದ ಹಿಂದುಸ್ತಾನ್ ಕಾಪರ್ ಲಿಮಿಟೆಡ್ (ಎಚ್‌ಸಿಎಲ್) ಘಟಕದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ನಿರಂತರ ಶ್ರಮ ವಹಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ. ಸದ್ಯಕ್ಕೆ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ಯಾವುದೋ ತಾಂತ್ರಿಕ ದೋಷ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ನಿಖರವಾದ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭೀಕರ ಅಪಘಾತವೊಂದು ಚಾಲಕನ ಸಮಯಪ್ರಜ್ಞೆಯಿಂದಾಗಿ ಸುಖಾಂತ್ಯ ಕಂಡಂತಾಗಿದೆ.


Share with

Leave a Reply

Your email address will not be published. Required fields are marked *