ಸುದೀಪ್ ರೈ ಪ್ರಕರಣಕ್ಕೆ ಹೊಸ ತಿರುವು – ಸೌಮ್ಯ ಶೆಟ್ಟಿಗೆ ಹೈಕೋರ್ಟ್ ಶಾಕ್..!

Share with

ಬೆಳ್ತಂಗಡಿ: ಕಳೆದ ಮಾರ್ಚ್ ತಿಂಗಳಿನಲ್ಲಿ ಅವಿಭಜಿತ ದ.ಕ‌. ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ನವ ವಿವಾಹಿತ ಸುದೀಪ್ ರೈ ನೆಲ್ಯಾಡಿ ಅವರ ಆತ್ಮಹತ್ಯೆ ಪ್ರಕರಣದ ಆರೋಪಿ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.


ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಕಡಬ ತಾಲೂಕಿನ ನೆಲ್ಯಾಡಿಯ ಸುದೀಪ್ ರೈ ಆತ್ಮಹತ್ಯೆ ಗೆ ಮುಖ್ಯವಾಗಿ ಆತನನ್ನು ಬಲವಂತವಾಗಿ ಮನೆಯವರಿಗೆ ತಿಳಿಸದೆ ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ ಯಾನೆ ಅಪ್ಪು ಶೆಟ್ಟಿ ನೀಡಿರುವ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಪ್ರಕರಣ ದಾಖಲಾಗಿತ್ತು‌. ಸುದೀಪ್ ರೈ ಅವರ ತಂದೆ ಬಿ.ದಾಮೋದರ ರೈ ಅವರು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆಯ ಪೊಲೀಸರು ಸೌಮ್ಯ ಶೆಟ್ಟಿಯನ್ನು ಏ. 11ರಂದು ಉಡುಪಿಯಲ್ಲಿ ಬಂಧಿಸಿದ್ದರು. ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏ. 30ರಂದು ಉಡುಪಿ ಜಿಲ್ಲಾ ನ್ಯಾಯಾಲಯ ತಿರಸ್ಕೃತಗೊಳಿಸಿತ್ತು. ಇದೀಗ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಸೌಮ್ಯ ಶೆಟ್ಟಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದ್ದು ಪ್ರಕರಣದಲ್ಲಿ ಆರೋಪಿತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.

ಸೌಮ್ಯ ಶೆಟ್ಟಿಯ ವಿರುದ್ಧ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆಯಾಗಿದ್ದು ಆಕೆಯ ವಿರುದ್ಧ ಹಲವಾರು ಸಾಕ್ಷಿಗಳು ಹಾಗೂ ದಾಖಲೆಗಳು ದೊರೆತಿವೆ ಎಂಬ ಮಾಹಿತಿಯಿದೆ. ಇಲ್ಲಿ ಸೌಮ್ಯ ಶೆಟ್ಟಿಯ ಮೇಲೆ ಹಲವಾರು ಅನುಮಾನಗಳು ಮೂಡಿದ್ದು ಆಕೆ ಸುದೀಪ್ ಹಾಗೂ ಆತನ ಮನೆಯವರಲ್ಲಿ ಆಕೆಯ ಹಿಂದಿನ ವಿವಾಹಗಳ ವಿಷಯವನ್ನು ಮುಚ್ಚಿಟ್ಟಿದ್ದು ಆಕೆಗೆ ಒಟ್ಟು ಎರಡೆರಡು ವಿವಾಹವಾಗಿದ್ದು ಸುದೀಪನನ್ನು ನೋಂದಾವಣಿ ಕಚೇರಿಯಲ್ಲಿ ವಿವಾಹವಾಗುವಾಗ ಅವಿವಾಹಿತೆ ಎಂದು ಸುಳ್ಳು ದಾಖಲೆಗಳನ್ನು ನೀಡಿ ರಿಜಿಸ್ಟರ್ ಮದುವೆಯಾಗಿದ್ದಾಳೆ.
ಅದಲ್ಲದೆ ಫೆಬ್ರವರಿ 6ರಂದು ಬೆಳ್ತಂಗಡಿ ತಾಲೂಕಿನ ಕುತ್ರೋಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿ ನೋಂದಾವಣಿ ಕಚೇರಿಗೆ ಅಲ್ಲಿಯ ದಾಖಲೆ ನೀಡಿದ್ದಾಳೆ. ನಂತರ ಆಕೆಯ ಊರು ಕಾರ್ಕಳದ ಕುಕ್ಕುಂದೂರು ಶೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 19 ರಂದು ವಿವಾಹವಾಗಿದ್ದು ಅಂದು ಸುದೀಪನಿಗೆ ಅದಾಗಲೇ ವಿಷ ಪ್ರಾಶನವಾಗಿದ್ದು ಆತನು ತೀವ್ರ ಅಸ್ವಸ್ಥನಾಗಿದ್ದ ಎಂದು ದೇವಳದ ಸಿಬ್ಬಂದಿಗಳು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಇದನ್ನೆಲ್ಲಾ ನೋಡುವಾಗ ಸೌಮ್ಯ ಶೆಟ್ಟಿ ಪೂರ್ವ ನಿಯೋಜಿತವಾಗಿ ಸುದೀಪನ ಮನೆಯವರ ಆಸ್ತಿಯನ್ನು ಕಬಳಿಸಲು ದಾಖಲೆಗಳನ್ನು ಸೃಷ್ಟಿ ಮಾಡಿರುವುದಾಗಿ ಮೇಲ್ನೋಟದಲ್ಲಿ ಕಂಡು ಬರುತ್ತಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಉಚ್ಛ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ದೂರುದಾರ ದಾಮೋದರ ರೈ ಪರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ‌ ನ್ಯಾಯವಾದಿಗಳಾದ ಚಿದಾನಂದ ಮಾಣಿ ಹಾಗೂ ಹೆಚ್. ಎನ್ ಸಮೀರ್ ಬೆಂಗಳೂರು ವಾದಿಸಿದ್ದರು.


Share with

Leave a Reply

Your email address will not be published. Required fields are marked *