ತಿರುವನಂತಪುರಂ: ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಕಾರು ಪ್ರಯಾಣಿಕರೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾದಾಗ, ಸಮಯ ಪ್ರಜ್ಞೆ ಮೆರೆದ ಇಬ್ಬರು ನರ್ಸ್‌ಗಳು ಸಿನಿಮಾ ಶೈಲಿಯಲ್ಲಿ ಬಸ್‌ನಿಂದ ಕೆಳಗೆ ಜಿಗಿದು ಅವರ ಜೀವ ಉಳಿಸಿದ ಅಪರೂಪದ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕಾಲಡಿ ಸೇತುವೆ ಬಳಿ ನಡೆದಿದೆ.

ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಅಂಜಲಿ ಬೈಜು ಮತ್ತು ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಆದ್ರ್ರಾ ರಾಜ್ ಅವರೇ ಈ ಸಾಹಸ ಮೆರೆದ ದೇವದೂತರು.
ತನ್ನಿಪುಳ ನಿವಾಸಿ, ಲಾಟರಿ ಅಂಗಡಿ ಮಾಲೀಕ ಸಿನೋಜ್ (43) ಎಂಬುವವರೇ ಪ್ರಾಣಾಪಾಯದಿಂದ ಪಾರಾದವರು. ಸಿನೋಜ್ ಗೆ ಎದೆನೋವು ಕಾಣಿಸಿಕೊಂಡ ಕಾರಣ ತಾವೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ಹೊರಟಿದ್ದರು. ಆದರೆ ಕಾಲಡಿ ಸೇತುವೆ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಕಾರಿನಲ್ಲೇ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದರು.
ಅದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ಮತ್ತು ಆದ್ರ್ರಾ, ರಸ್ತೆ ಬದಿಯಲ್ಲಿ ಜನ ಜಮಾಯಿಸಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಬಸ್ಸಿನಿಂದ ಕೆಳಗಿಳಿದು ಕಾರಿನ ಬಳಿ ಧಾವಿಸಿದರು. ಸಿನೋಜ್ ಅವರಿಗೆ ಹೃದಯಾಘಾತವಾಗಿರುವುದನ್ನು ಪತ್ತೆಹಚ್ಚಿ, ತಕ್ಷಣವೇ ಕಾರಿನೊಳಗೆ ಸಿಪಿಆರ್ ನೀಡಲು ಆರಂಭಿಸಿದರು.
ಅಲ್ಲದೆ ಅಲ್ಲಿದ್ದ ಸಾರ್ವಜನಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಟ್ರಾಫಿಕ್ ನಲ್ಲಿ ಸಿಲುಕಿದ್ದ ವಾಹನಕ್ಕೆ ಸಾಗಲು ವ್ಯವಸ್ಥೆ ಮಾಡಿಕೊಟ್ಟು ಅಂಗಮಾಲಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ದಾರಿಯುದ್ದಕ್ಕೂ ಇಬ್ಬರು ನರ್ಸ್ ಗಳು ವ್ಯಕ್ತಿಗೆ ಸಿಪಿಆರ್ ನೀಡುತ್ತಲೇ ಇದ್ದು ಆಸ್ಪತ್ರೆ ಹತ್ತಿರ ಬರುವ ವೇಳೆ ಸಿನಾಜ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿದ್ದು ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಟ್ರಾಫಿಕ್ ಸಂದಿಗ್ಧತೆಯಲ್ಲೂ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಜೀವ ಉಳಿಸಿದ ಇಬ್ಬರು ನರ್ಸ್‌ಗಳು ಹಾಗೂ ಸ್ಥಳೀಯರ ಸಮಯಪ್ರಜ್ಞೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.




