ಪಥನಂತಿಟ್ಟ: ಕೇರಳದ ಪಥನಂತಿಟ್ಟ ಜಿಲ್ಲೆಯ ಕೆಲ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವುದರ ಜೊತೆಗೆ ಕಂಡಕ್ಟರ್‌ಗಳು ಮುರುಕ್ಕು, ಅಚ್ಚಪ್ಪಂ, ಕುಳಲಪ್ಪಂ ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ಮಾರಾಟ ಮಾಡಿದರು.

ಇದು ಹೊಸ ವ್ಯವಹಾರ ಆರಂಭಿಸಲು ಅಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಖಾಸಗಿ ಬಸ್‌ಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಿ ನಡೆಸಿದ ಸಾಂಕೇತಿಕ ಪ್ರತಿಭಟನೆ ಇದಾಗಿದೆ.
ಇತ್ತೀಚೆಗೆ ರಾಜ್ಯದ ಸಾರಿಗೆ ಸಚಿವರು ಖಾಸಗಿ ಬಸ್ ಮಾಲೀಕರು ಆದಾಯ ಹೆಚ್ಚಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ಸಲಹೆ ನೀಡಿದ್ದರು. ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ, “ಬಸ್‌ನಲ್ಲಿ ತಿಂಡಿ ಮಾರಾಟ ಮಾಡಿದರೆ ಎಷ್ಟು ಆದಾಯ ಬರುತ್ತದೆ ಎಂಬುದನ್ನು ಸರ್ಕಾರಕ್ಕೆ ತೋರಿಸಲು” ಈ ಪ್ರತಿಭಟನೆ ನಡೆಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಬ್ಬ ಕಂಡಕ್ಟರ್,
“ನಾವು ಲಾಭಕ್ಕಾಗಿ ತಿಂಡಿ ಮಾರಾಟ ಮಾಡುತ್ತಿಲ್ಲ. ಖಾಸಗಿ ಬಸ್‌ಗಳಿಗೆ ಪರ್ಯಾಯ ಆದಾಯ ಎಂದರೆ ವಾಸ್ತವದಲ್ಲಿ ಎಷ್ಟು ಸೀಮಿತ ಎಂಬುದನ್ನು ಸರ್ಕಾರಕ್ಕೆ ತೋರಿಸಲು ಈ ಕ್ರಮ ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.
ಖಾಸಗಿ ಬಸ್ ಸಿಬ್ಬಂದಿಯ ಪ್ರಕಾರ, ಮಹಿಳೆಯರ ಉಚಿತ ಪ್ರಯಾಣ ಯೋಜನೆಯ ನಂತರ ಆದಾಯದಲ್ಲಿ ಗಮನಾರ್ಹ ಕುಸಿತ ಉಂಟಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಬಸ್ ವಲಯ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




