ಕನ್ನಡದಲ್ಲಿ ‘ಒಂದಲ್ಲಾ ಎರಡಲ್ಲಾ’, ‘ಗುರು ಶಿಷ್ಯರು’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆನಂದ್ ನೀನಾಸಂ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ, ರೋಹಿತ್ ಮತ್ತು ದೀಪಿಕಾ ಆರಾಧ್ಯ ಮುಖ್ಯಭೂಮಿಕೆಯಲ್ಲಿರುವ ‘ಆರ’ ಸಿನಿಮಾವು ಜು. 28ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಕರಾವಳಿ ಸೊಗಡಿನ ಕಥೆಯಿದ್ದು, ಬಹುತೇಕ ಚಿತ್ರೀಕರಣವನ್ನು ಉಡುಪಿಯಲ್ಲಿ ಮಾಡಲಾಗಿದೆ.
‘ಕಾಂತಾರ’ ತೆರೆಕಂಡ ಬಳಿಕ ಕರಾವಳಿ ಸೊಗಡಿನ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗಿದೆ. ಕರಾವಳಿ ಸೊಗಡಿನ ಜೊತೆಗೆ ದೈವದ ಕಥೆಗಳು ಹೆಚ್ಚೆಚ್ಚು ಬರುತ್ತಿದೆ. ಜು. 28ರಂದು ತೆರೆಗೆ ಬಂದಿರುವ ‘ಆರ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇದೆ. ಆದರೆ ಇದು 5 ವರ್ಷಗಳ ಹಿಂದೆಯೇ ಶುರುವಾದ ಯೋಜನೆಯಂತೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ‘ಆರ’ ಸಿನಿಮಾದಲ್ಲಿ ನಟ ಆನಂದ್ ನೀನಾಸಂ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ಈ ಚಿತ್ರದ ಬಗ್ಗೆ ನಿರ್ದೇಶಕ ಅಶ್ವಿನ್ ವಿಜಯಮೂರ್ತಿ, ‘ಆರ ಎಂಬ ಯುವಕನ ಸುತ್ತ ನಡೆಯುವ ಕಥೆಯನ್ನು ಹೇಳಿದ್ದೇವೆ. ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿರುವ ಸಿನಿಮಾ ನಮ್ಮದು. ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿರುವ ರೋಹಿತ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅವರು ಮೂಲತಃ ಉಡುಪಿಯವರು. ಅವರು ನೋಡಿ ಬೆಳೆದ ಪರಿಸರದ ಕಥೆಯನ್ನು ಇಲ್ಲಿ ಹೇಳಿದ್ದಾರೆ. ಅದನ್ನು ತುಂಬ ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದ್ದೇವೆ. ಸಿನಿಮಾದಲ್ಲೂ ಉಡುಪಿ ಕಡೆಯ ಕನ್ನಡವನ್ನೇ ಬಳಕೆ ಮಾಡಿಕೊಂಡಿದ್ದೇವೆ. ನಮಗೆ ಉಳಿದವರು ಕಂಡಂತೆ ಸಿನಿಮಾ ಹೆಚ್ಚು ಸ್ಪೂರ್ತಿ’ ಎನ್ನುತ್ತಾರೆ.