ಟೊಮೆಟೊ ಮಾರಿ ಮೂರು ತಿಂಗಳಲ್ಲೇ ಕೋಟ್ಯಾಧಿಪತಿಯಾದ ರೈತ..!!

Share with

ಪುಣೆ

ಪುಣೆ: ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದ್ದರೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೆಟೊ ಮಾರಿ ತಿಂಗಳಿನಲ್ಲೇ 3 ಕೋಟಿ ರೂ. ಆದಾಯ ಗಳಿಸಿದ್ದಾರೆ. 

ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಪಾಚ್‌ಘರ್ ಗ್ರಾಮದ ಈಶ್ವರ್ ಗಾಯ್ಕರ್ ಭರ್ಜರಿ ಆದಾಯ ಗಳಿಸಿದ ರೈತ. ಇದೇ ವರ್ಷ ಮೇ ತಿಂಗಳಲ್ಲಿ ಟೊಮೆಟೊ ಬೆಳೆದಿದ್ದ ಈಶ್ವರ್, ಬೆಲೆ ಕುಸಿತದಿಂದಾಗಿ ಬೆಳೆಯನ್ನು ರಸ್ತೆಗೆ ಎಸೆಯಬೇಕಾದ ಕಠಿಣ ಸವಾಲನ್ನು ಎದುರಿಸಬೇಕಾಯಿತು. ಆದರೂ ವಿಚಲಿತರಾಗದೇ  ಈಗಾಗಲೇ ತಮ್ಮ 12 ಎಕರೆಯಲ್ಲಿ ಬೆಳೆಯುತ್ತಿದ್ದ ಟೊಮೆಟೊ ಬೆಳೆಯನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವನ್ನು ಕೈಗೊಂಡರು. ಇದಕ್ಕಾಗಿ ಹಗಲೂ ರಾತ್ರಿ ದಣಿವರಿಯದೇ ದುಡಿದರು.

ಜೂ.11ರಿಂದ ಜು. 18ರ ನಡುವೆ ಜುನ್ನಾರ್ ತಾಲ್ಲೂಕಿನ ನಾರಾಯಣಗಾಂವ್ ಎಪಿಎಂಸಿಯಲ್ಲಿ 18 ಸಾವಿರ ಕ್ರೇಟ್‌ಗಳಷ್ಟು (1 ಕ್ರೇಟ್‌ಗೆ 20 ಕೆಜಿ) ಟೊಮೆಟೊ ಮಾರಿರುವ ಈಶ್ವರ್ 3 ಕೋಟಿ ರೂ. ಗಳಿಸಿದ್ದಾರೆ. ಉಳಿದಿರುವ ಸುಮಾರು 4 ಸಾವಿರ ರೂ. ಕ್ರೇಟ್‌ಗಳಷ್ಟು ಟೊಮೆಟೊ ಮಾರಿ 50 ಲಕ್ಷ ರೂ. ಹೆಚ್ಚುವರಿ ಆದಾಯ ಪಡೆಯುವ ನಿರೀಕ್ಷೆ ಅವರದ್ದು.

‘ಟೊಮೆಟೊ ಬೆಳೆಯಲು, ನಿರ್ವಹಣೆ ಮತ್ತು ಸಾಗಣೆಗಾಗಿ ಒಟ್ಟು ₹ 40 ಲಕ್ಷ ವೆಚ್ಚವಾಗಿದ್ದು, ಜೂ.11ರಂದು ಒಂದು ಕ್ರೇಟ್‌ಗೆ ₹ 770ರಂತೆ ಮಾರಿದ್ದರು. ಆಗ ಬೆಲೆ ಕೆಜಿಗೆ ₹ 37ರಿಂದ 38 ಇತ್ತು. ಆದರೆ ಜು.18ರಂದು ಒಂದು ಕ್ರೇಟ್‌ಗೆ ₹ 2,200 ಪಡೆದಿದ್ದೆ. ಆಗ 1 ಕೆಜಿಗೆ ₹ 110 ಆಗಿತ್ತು’ ಎಂದು ಈಶ್ವರ್ ಹೇಳಿದ್ದಾರೆ.

‘ಟೊಮೆಟೊ ಬೆಳೆಗಾರರಿಗೆ ಇದು ಉತ್ತಮ ಸಮಯ. ಆದರೆ, ನಾನು ಕೆಟ್ಟ ಸಮಯವನ್ನೂ ನೋಡಿದ್ದೇನೆ. ಇದೇ ವರ್ಷದ ಮೇ ತಿಂಗಳಲ್ಲಿ ಒಂದು ಎಕರೆಯಷ್ಟು ಮಾತ್ರ ಟೊಮೆಟೊ ಬೆಳೆ ಕೈಗೆ ಬಂದಿತ್ತು. ಆದರೆ ಆಗ ಬೆಲೆ ತೀವ್ರ ಕುಸಿತವಾಗಿದ್ದರಿಂದ ಬೆಳೆದ ಬಹುಪಾಲು ಬೆಳೆಯನ್ನು ಎಸೆಯಬೇಕಾಯಿತು. ಆಗ ಪ್ರತಿ ಕ್ರೇಟ್ ದರ ಕೇವಲ ₹ 50 ಇತ್ತು. ಅಂದರೆ 1 ಕೆ.ಜಿ.ಟೊಮೆಟೊಗೆ ಕೇವಲ ಎರಡೂವರೆ ರೂಪಾಯಿ ಇತ್ತು’ ಎಂದು ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *